

ನೆಲ್ಯಾಡಿ: ನೆಲ್ಯಾಡಿ ವಿಶ್ವ ವಿದ್ಯಾಲಯ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ನೇಮಕ ಬುಧವಾರ ದಂದು ಕಾಲೇಜಿನಲ್ಲಿ ಜರುಗಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಅವರು ವಹಿಸಿ ಮಾತನಾಡಿ ಶಿಕ್ಷಕ-ರಕ್ಷಕ ಸಂಘದ ಮಹತ್ವವನ್ನು ಉಲ್ಲೇಖಿಸಿ, ಶೈಕ್ಷಣಿಕ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು–ಶಿಕ್ಷಕರು–ವಿದ್ಯಾರ್ಥಿಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕೆಂದು ಅವರು ಹೇಳಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಸಂಘದ ಖಜಾಂಚಿವೆರೋನಿಕಾ ಪ್ರಭಾ ವಿ.ಪಿ. 2024–25ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ಸಭೆಯು ಅದನ್ನು ಅನುಮೋದಿಸಿತು.
ಈ ಸಂದರ್ಭ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಕಾರ್ಯಾಧ್ಯಕ್ಷರಾಗಿ ಉಮ್ಮರ್ ಬೈಲಂಗಡಿ, ಉಪಾಧ್ಯಕ್ಷರಾಗಿ ಅಶ್ವಿತಾ ರೈ, ಸಹ ಕಾರ್ಯದರ್ಶಿಯಾಗಿ ಸೇಸಮ್ಮ, ಸದಸ್ಯರಾಗಿ ಧನಂಜಯ್, ಲಿಂಗಪ್ಪ ಗೌಡ ಹಾಗೂ ಉಮ್ಮರ್ ನುಸ್ಲಿಯಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಹೂ ನೀಡಿ ಕಾಲೇಜಿನ ಸಂಯೋಜಕ ಡಾ.ಸುರೇಶ್ ಸ್ವಾಗತಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಡಾ. ಸೀತಾರಾಮ ಪಿ. ನಡೆಸಿಕೊಟ್ಟರು. ನೂತನ ಹಾಗೂ ಪೂರ್ವ ಪದಾಧಿಕಾರಿಗಳು, ಹೆತ್ತವರು ಹಾಗೂ ಪೋಷಕರು ತಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.
ನೂತನ ಕಾರ್ಯಾಧ್ಯಕ್ಷ ಉಮ್ಮರ್ ಬೈಲಂಗಡಿ ಅವರು ಕಾಲೇಜಿನ ಉಳಿವಿನ ಅಗತ್ಯತೆ ಹಾಗೂ ಅದರ ಮಹತ್ವದ ಕುರಿತು ಮಾತನಾಡಿ, ಮುಂದಿನ ದಿನಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಿಂದಿನ ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷ ಉದಯ, ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಶಿವಣ್ಣ, ನಾಗೇಶ ಹಾಗೂ ಪಾರ್ವತಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ಚಂದ್ರಕಲಾ ವಂದಿಸಿದರು. ಉಪನ್ಯಾಸಕಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.






