ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯ ಎನ್‌ಎಸ್‌ಎಸ್ ವತಿಯಿಂದ ಹೃದಯ ಪುನಶ್ಚೇತನ ತರಬೇತಿ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ “ಹೃದಯ ಪುನಶ್ಚೇತನ ಮಾಹಿತಿ ಹಾಗೂ ಪ್ರಾಯೋಗಿಕ ತರಬೇತಿ” ಕಾರ್ಯಕ್ರಮ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಫಾ.ಅನಿಲ್ ಪರಶೇರಿಲ್ ಹಾಗೂ ಸಂಚಾಲಕರಾದ ಫಾ ನೋಮಿಸ್ ಕುರಿಯಾಕೋಸ್ ಅವರ ಮಾರ್ಗದರ್ಶನದಲ್ಲಿ  ಗುರುವಾರದಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪನ್ಯಾಸಕ ಮಧು ಎ.ಜೆ. ವಹಿಸಿದ್ದರು. ಈ ಸಂದರ್ಭದಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಶ್ಯಾಮಲಾ ಅವರು ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ನಾಣ್ಯದ ಎರಡು ಮುಖಗಳಂತೆ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದ ಜೊತೆಗೆ ಆರೋಗ್ಯದ ಪ್ರಾಥಮಿಕ ಅರಿವು ಪಡೆದುಕೊಳ್ಳುವುದು ಕಾಲದ ಅವಶ್ಯಕತೆ. ಇತ್ತೀಚಿನ ದಿನಗಳಲ್ಲಿ ಕಿರಿಯ ವಯಸ್ಸಿನವರಲ್ಲಿಯೇ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡವೇ ಅದರ ಪ್ರಮುಖ ಕಾರಣ. ಮುಂಜಾಗ್ರತೆ ವಹಿಸುವ ಮೂಲಕ ಅನೇಕ ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಿದರು.

ತರಬೇತಿ ಕಾರ್ಯಕ್ರಮದಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಶ್ಯಾಮಲಾ, ಪ್ರಜ್ವಲ್, ದೀಪಿಕಾ, ಸುಧಾ ಹಾಗೂ ದೀಪ್ತಿ ಅವರು ವಿದ್ಯಾರ್ಥಿಗಳಿಗೆ ಹೃದಯ ಪುನಶ್ಚೇತನ ಕುರಿತು ಪ್ರಾಯೋಗಿಕ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳು ಹೃದಯಾಘಾತದ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ ನೀಡುವ ವಿಧಾನಗಳನ್ನು ನೇರವಾಗಿ ಕಲಿತು ಅನುಭವಿಸಿದರು.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದ ಕೌಶಿಕ್ ಅವರನ್ನು ಎನ್‌ಎಸ್‌ಎಸ್ ಘಟಕದ ವತಿಯಿಂದ ಗೌರವಿಸಲಾಯಿತು. ಎನ್‌ಎಸ್‌ಎಸ್ ಯೋಜನಾಧಿಕಾರಿ, ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ. ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

  •  

Leave a Reply

error: Content is protected !!