

ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರದಂದು ಉತ್ಸಾಹಭರಿತವಾಗಿ ವಾರ್ಷಿಕ ಕ್ರೀಡಾಕೂಟವು ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ನೆಲ್ಯಾಡಿ ಹೊರಠಾಣೆಯ ಹೆಡ್ ಕಾನ್‌ಸ್ಟೇಬಲ್ ಪ್ರವೀಣ್ ಅವರು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಕ್ರೀಡಾಕೂಟಕ್ಕೆ ವಿಜೃಂಭಣೆಯ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಕ್ರೀಡೆ ಎಂಬುದು ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ವಿಕಾಸಕ್ಕೆ ಅತ್ಯಂತ ಅಗತ್ಯವಾದ ಅಂಶ. ಕ್ರೀಡೆಯಿಂದ ಶಾರೀರಿಕ ಚೈತನ್ಯ ಮಾತ್ರವಲ್ಲ, ಜೀವನದಲ್ಲಿ ಶಿಸ್ತಿನ ಗುಣವೂ ಬೆಳೆಯುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಂಶುಪಾಲ ಫಾ.ಡಾ.ವರ್ಗೀಸ್ ಕೈಪನಡ್ಕ ಮಾತನಾಡಿ, ಕ್ರೀಡೆ ಎಂಬುದು ಕೇವಲ ಸ್ಪರ್ಧೆಯ ವೇದಿಕೆಯಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸದ ವೇದಿಕೆಯಾಗಿದೆ. ನಿಮ್ಮಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಹೊರಹೊಮ್ಮಿಸುವುದಕ್ಕೆ ಈ ವೇದಿಕೆ ಸಹಾಯಕ. ಇಲ್ಲಿ ಜಾತಿ, ಮತ, ಧರ್ಮದ ಬೇಧವಿಲ್ಲ ಕ್ರೀಡೆ ಎಲ್ಲರಿಗೂ ಸಮಾನವಾದ ಅವಕಾಶ ಒದಗಿಸುತ್ತದೆ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್, ಸಂಸ್ಥೆಯ ಕಾರ್ಯದರ್ಶಿ ಫಾ. ಸ್ಯಾಮುವೆಲ್ ಜಾರ್ಜ್, ಬೋರ್ಡಿಂಗ್ ಮಾಸ್ಟರ್ ಫಾ.ವರ್ಗೀಸ್ ಎಸ್., ಉಪಪ್ರಾಂಶುಪಾಲ ಜೋಸ್.ಎಂ.ಜೆ., ಶಿಕ್ಷಕರ-ರಕ್ಷಕರ ಸಂಘದ ಅಧ್ಯಕ್ಷ ಸನ್ನಿ ಕೆ.ಎಸ್., ಹಾಗೂ ಮುಖ್ಯಶಿಕ್ಷಕ ಜಾರ್ಜ್ ಕೆ ತೋಮಸ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕರಾದ ಸುಧಾಕರ್, ಮನೋಜ್, ಹಾಗೂ ಅಲ್ಫೋನ್ಸ್ ಕ್ರೀಡಾಕೂಟದ ಯಶಸ್ಸಿಗಾಗಿ ಶ್ರಮಿಸಿದರು. ಆಲ್ಬಿನ್ ಜಾರ್ಜ್ ಅತಿಥಿಗಳನ್ನು ಸ್ವಾಗತಿಸಿದರು, ಕ್ಷೀತಿ ಜೈನ್ ಮತ್ತು ಜೆರೂಷ ಕಾರ್ಯಕ್ರಮ ನಿರೂಪಿಸಿದರು. ಶ್ರೇಯಾ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಕ್ರೀಡೆಯನ್ನು ಆಯೋಜಿಸಲಾಯಿತು.






