


ಕೊಕ್ಕಡ: ಶಿಶಿಲ ಅಡ್ಡಹಳ್ಳ ಫ್ರೆಂಡ್ಸ್ ತಂಡದ ಸಾರಥ್ಯದಲ್ಲಿ ಭಾನುವಾರ ನಡೆದ ದೋಸೆ ಹಬ್ಬ ಹಾಗೂ ಹಗ್ಗಜಗ್ಗಾಟ ಕಾರ್ಯಕ್ರಮವು ಗ್ರಾಮಸ್ಥರ ಉತ್ಸಾಹದ ನಡುವೆ ವೈಭವದಿಂದ ನೆರವೇರಿತು.
ಬೆಳಿಗ್ಗೆ ನಡೆದ ದೋಸೆ ಹಬ್ಬಕ್ಕೆ ಚಾಲನೆ ನೀಡಿದ ಶಿಶಿಲೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೂರಜ್ ನೆಲ್ಲಿತ್ತಾಯ ಅವರು ದೋಸೆ ಹಬ್ಬ ಗ್ರಾಮೀಣ ಜನರ ಒಗ್ಗಟ್ಟಿನ ಸಂಕೇತ ಎಂದರು.
ಸಂಜೆ ಶಿಶಿಲ ಅಡ್ಡಹಳ್ಳ ಫ್ರೆಂಡ್ಸ್ ತಂಡದ ಅಧ್ಯಕ್ಷ ಕರುಣಾಕರ ಶಿಶಿಲ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಶಾಸಕ ಹರೀಶ್ ಪೂಂಜಾ ಮಾತನಾಡಿ ಶಿಶಿಲದ ಜನರ ಒಗ್ಗಟ್ಟು ಶ್ಲಾಘನೀಯ. ಶಿಶಿಲ ಗ್ರಾಮ ಧಾರ್ಮಿಕ, ಸಾಂಸ್ಕೃತಿಕ ಮತ್ತು ನೈಸರ್ಗಿಕ ಸೌಂದರ್ಯದಿಂದ ತುಂಬಿದ ಪ್ರದೇಶ, ಮುಂದಿನ ದಿನಗಳಲ್ಲಿ ನಿಮ್ಮಂತಹ ಯುವಕರ ಶ್ರಮದಿಂದ ಶಿಶಿಲ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗುವುದು ನನ್ನ ಕನಸು ನಾನು ಅದರ ಬೆಂಬಲಕ್ಕೆ ನಿಂತಿದ್ದೇನೆ. ಆಯೋಜಕರು ಶಿಶಿಲ ಸರಕಾರಿ ಶಾಲೆಯ ನೂತನ ಕೊಠಡಿ ಉದ್ಘಾಟನೆ ಇನ್ನೆರಡು ತಿಂಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರೊಬ್ಬರನ್ನು ಶಿಶಿಲಕ್ಕೆ ಆಹ್ವಾನಿಸುವ ಉತ್ತಮ ಆಲೋಚನೆ ಮಾಡಿದ್ದಾರೆ. ಖಂಡಿತವಾಗಿ ಕರೆದುಕೊಂಡು ಬರುವೆ. ಇದು ಐತಿಹಾಸಿಕ ಕ್ಷಣವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ ಶಿಶಿಲ ನಾಡಿನ ಜನತೆ ಸಂಸ್ಕೃತಿಪರರು. ದೋಸೆ ಹಬ್ಬದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಒಗ್ಗೂಡಿಸುತ್ತವೆ. ಇಂತಹ ಹಬ್ಬಗಳು ಯುವಜನತೆಯ ಸಕಾರಾತ್ಮಕ ಶಕ್ತಿಗೆ ಮಾರ್ಗದರ್ಶಕವಾಗಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಹತ್ಯಡ್ಕ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ, ಶಿಶಿಲ ಗ್ರಾ.ಪಂ.ಅಧ್ಯಕ್ಷ ಸುದೀನ್ ಡಿ, ಶಿಶಿಲೇಶ್ವರ ದೇವಾಲಯ ಆಡಳಿತ ಸಮಿತಿಯ ಅಧ್ಯಕ್ಷ ಸುನಿಲ್ ಗೋಖಲೆ, ಗ್ರಾ.ಪಂ.ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು ಗಾಯತ್ರಿ ಮತ್ತು ರಶ್ಮಿತಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿತು. ಸಂದೀಪ್ ಅಮ್ಮುಡಂಗೆ ಸ್ವಾಗತಿಸಿದರು. ಚಂದನ ಕುಮಾರಿ ಕಾರ್ಯಕ್ರಮ ನಿರೂಪಿಸಿದರು, ಶಿವಾನಂದ ಶಿಶಿಲ ವಂದಿಸಿದರು ಹಾಗೂ ಹಗ್ಗಜಗ್ಗಾಟ ನಿರೂಪಣೆಯನ್ನು ಸುರೇಶ್ ಪಡಿಪಂಡ ನೆರವೇರಿಸಿದರು.






