

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಕಂಗಿನಾರುಬೆಟ್ಟು ಪ್ರದೇಶದಲ್ಲಿ ಗೋಮಾಂಸದ ತ್ಯಾಜ್ಯ ಪತ್ತೆಯಾದ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದನದ ಮೂರು ತಿಂಗಳ ಗರ್ಭ ಸಹಿತ ತ್ಯಾಜ್ಯ ಪತ್ತೆಯಾಗಿದ್ದು, ಕದಿಯಲಾದ ಗೋವನ್ನು ಹತ್ಯೆಗೈದು ಅದರ ಮಾಂಸವನ್ನು ಸಾಗಾಟ ಮಾಡುವ ವೇಳೆ, ಹೊಟ್ಟೆಯಲ್ಲಿದ್ದ ಗರ್ಭಸ್ಥ ಕರುವನ್ನೂ ಕೂಡ ಎಸೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಪತ್ತೆಯಾದ ತ್ಯಾಜ್ಯ ಕೊಳೆತ್ತಿರುವುದರಿಂದ, ಅದು ಎರಡು ಅಥವಾ ಮೂರು ದಿನಗಳ ಹಿಂದೆ ಎಸೆಯಲ್ಪಟ್ಟಿರಬಹುದೆಂದು ಅಂದಾಜಿಸಲಾಗಿದೆ.
ವಾರದ ಹಿಂದೆ ಕಣಿಯೂರು ಗ್ರಾಮದ ತುರ್ಕರಕೋಡಿ ಪ್ರದೇಶದಿಂದ ಈಶ್ವರ ನಾಯ್ಕ ಎಂಬವರ ದನವೊಂದು ಕದಿಯಲ್ಪಟ್ಟಿದ್ದು, ಈ ಘಟನೆಗೆ ಸಂಬಂಧವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ನಿರಂತರವಾಗುತ್ತಿರುವ ಗೋ ಕಳ್ಳತನ ಮತ್ತು ಹತ್ಯೆಯಿಂದ ಹೈನುಗಾರರು ಕಂಗೆಟ್ಟಿದ್ದಾರೆ.
ಜಿಲ್ಲೆಯಲ್ಲಿ ಇತರ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿದ್ದರೂ, ಗೋಹಂತಕರನ್ನು ನಿಗ್ರಹಿಸಲು ಪೊಲೀಸರಿಗೆ ಆಗುತ್ತಿಲ್ಲ ಎಂಬುದಾಗಿ ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷ ಸುದರ್ಶನ್ ಎಂ ಅವರು ಹೇಳಿದರು.
ಈ ಕುರಿತು ಅವರು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ, ಕಂಗಿನಾರುಬೆಟ್ಟು ಸೇತುವೆಯ ಕೆಳಗೆ ಎಸೆಯಲ್ಪಟ್ಟ ಗೋಮಾಂಸದ ತ್ಯಾಜ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮೂರು ದಿನಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪೊಲೀಸ್ ಠಾಣೆಯ ಮುಂದೆ ಧರಣಿ ಮತ್ತು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.






