ಕಾಡಾನೆಯ ಹಾವಳಿಯಿಂದ ರೈತರಿಗೆ ತೀವ್ರ ಹಾನಿ – ತಡೆಗೆ ಸಿಪಿಐಎಂ ಆಗ್ರಹ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ಹಾಗೂ ಕಡಬ ತಾಲೂಕುಗಳ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರ ಬೆಳೆ ನಾಶದ ಜೊತೆಗೆ ಜೀವ ಹಾನಿಯೂ ಸಂಭವಿಸುತ್ತಿರುವುದನ್ನು ಖಂಡಿಸಿ, ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಸರ್ಕಾರದಿಂದ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಶಿಬಾಜೆ, ಹತ್ಯಡ್ಕ, ಶಿಶಿಲ, ರೆಖ್ಯ, ಪಟ್ರಮೆ, ಕೊಕ್ಕಡ, ಕಳೆಂಜ, ನಿಡ್ಲೆ, ಧರ್ಮಸ್ಥಳ, ನೆರಿಯ, ಚಾರ್ಮಾಡಿ, ಚಿಬಿದ್ರಿ, ತೋಟತ್ತಾಡಿ ಸೇರಿದಂತೆ ಕಡಬ ತಾಲೂಕಿನ ಮರ್ದಾಳ, ನೆಲ್ಯಾಡಿ, ಕೌಕ್ರಾಡಿ, ಶಿರಾಡಿ, ನೂಜಿಬಾಳ್ತಿಲ, ಬಲ್ಯ ಭಾಗಗಳಲ್ಲಿ ನಿರಂತರ ಕಾಡಾನೆಗಳ ದಾಳಿಯಿಂದ ಬೆಳೆ ಹಾನಿ, ಜೀವ ಹಾನಿ ಸಂಭವಿಸುತ್ತಿದೆ ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಆರೋಪಿಸಿದರು.

ಸೌತಡ್ಕ, ಮರ್ದಾಳ ಪ್ರದೇಶಗಳಲ್ಲಿ ಇತ್ತೀಚೆಗೆ ಇಬ್ಬರ ಜೀವ ಹಾನಿಯಾಗಿದ್ದರೂ, ಸರಕಾರ ಮತ್ತು ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿರುವುದು ವಿಷಾದನೀಯ ಎಂದು ಅವರು ಟೀಕಿಸಿದರು. ಅರಣ್ಯ ಇಲಾಖೆ ರೈತರ ಭೂಮಿಗೆ ದಾಳಿ ಮಾಡಿ ಕಾನೂನುಬದ್ಧ ರೈತರ ಬದುಕು ದ್ವಂಸಗೊಳಿಸುತ್ತಿದೆ, ಆದರೆ ಆನೆಗಳ ಹಿಡಿತ, ಸ್ಥಳಾಂತರದ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಆನೆ ಕೊಲ್ಲಲು ಕೋವಿ ನೀಡುವ ಹೇಳಿಕೆಗಳನ್ನಾಡುವ ಬದಲು, ಆನೆಗಳನ್ನು ಹಿಡಿದು ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಸರ್ಕಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. “ಜನರ ಜೀವ ರಕ್ಷಣೆ ಮಾಡದೇ ಅರಣ್ಯ ರಕ್ಷಣೆಯ ಮಾತು ಮಾಡುವ ಅರಣ್ಯ ಇಲಾಖೆ ಜನವಿರೋಧಿ ಧೋರಣೆ ತೋರಿಸುತ್ತಿದೆ,” ಎಂದು ಟೀಕಿಸಿದರು.

ರೈತರ ಬೆಳೆ ಹಾನಿ ಮತ್ತು ಜೀವ ಹಾನಿಗೆ ತಕ್ಷಣ ಪರಿಹಾರ ಒದಗಿಸಬೇಕು. ಇಲ್ಲವಾದರೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ವಿರೋಧಿಸಿ ಮುತ್ತಿಗೆ ಹಾಕುವಂತಹ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿ.ಎಂ.ಭಟ್ ಎಚ್ಚರಿಸಿದರು.

  •  

Leave a Reply

error: Content is protected !!