

ಕಡಬ: ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯ ಸೇವೆಗಳ ಕೊರತೆ ಕುರಿತು ಸಾರ್ವಜನಿಕ ಅಸಮಾಧಾನ ತಾರಕಕ್ಕೇರಿದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತುರ್ತು ಕ್ರಮ ಕೈಗೊಂಡಿದೆ. ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯರಾದ ಡಾ. ಮಧುಶ್ರೀ ಕೆ. ಅವರನ್ನು ವಾರದಲ್ಲಿ ಮೂರು ದಿನಗಳು— ಸೋಮವಾರ, ಗುರುವಾರ ಮತ್ತು ಶನಿವಾರ — ಹೊರರೋಗಿ ವಿಭಾಗದ ಕರ್ತವ್ಯ ನಿರ್ವಹಣೆಗೆ ತಾತ್ಕಾಲಿಕವಾಗಿ ನಿಯೋಜಿಸುವಂತೆ ನ.14ರಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿ ಹಾಗೂ ತಜ್ಞರ ಹುದ್ದೆಗಳು ದೀರ್ಘಕಾಲದಿಂದ ಖಾಲಿಯಿರುವುದು ಸಾರ್ವಜನಿಕರಲ್ಲಿ ಆಕ್ರೋಶವನ್ನು ಹುಟ್ಟುಹಾಕಿತ್ತು. ಇದೇ ಹಿನ್ನೆಲೆಯಲ್ಲಿ “ಸಾರ್ವಜನಿಕ ಹಿತಾಸಕ್ತಿ” ನೆಪವಾಗಿ ಈ ತಾತ್ಕಾಲಿಕ ನೇಮಕಾತಿ ಜಾರಿಗೊಳಿಸಲಾಗಿದೆ ಎಂದು ಇಲಾಖೆಯ ಜ್ಞಾಪನೆಯಲ್ಲಿ ಉಲ್ಲೇಖಿಸಲಾಗಿದೆ. ಕರ್ತವ್ಯಕ್ಕೆ ನಿಯೋಜಿತ ವೈದ್ಯಾಧಿಕಾರಿಗಳು ಯಾವುದೇ ದೂರುಗಳಿಗೆ ಕಾರಣವಾಗದೇ, ಸೂಚಿಸಿದ ದಿನಗಳಲ್ಲಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಆದೇಶ ಸ್ಪಷ್ಟಪಡಿಸುತ್ತದೆ.
ಈ ಆದೇಶದ ಪ್ರತಿಯನ್ನು ಸಂಬಂಧಪಟ್ಟ ವೈದ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗೆ ಕಳುಹಿಸಲಾಗಿದ್ದು, ತಕ್ಷಣದ ಕಾರ್ಯಾನುಷ್ಠಾನದ ಸೂಚನೆ ನೀಡಲಾಗಿದೆ.
ಇದರ ನಡುವೆ ನ.20ರಂದು ಬೆಳಗ್ಗೆ 10.30ಕ್ಕೆ ಕಡಬ ತಾಲೂಕು ಅಖಿಲ ಕರ್ನಾಟಕ ರೈತ, ಕೃಷಿ, ಕಾರ್ಮಿಕರ ಒಕ್ಕೂಟ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರವಾಗಿತ್ತು. ಆರೋಗ್ಯ ಕೇಂದ್ರದ ಮೂಲಸೌಕರ್ಯ, ವೈದ್ಯರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಈ ಪ್ರತಿಭಟನೆ ಘೋಷಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ನ.12ರಂದು ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಮುಖಂಡರನ್ನು ಭೇಟಿ ಮಾಡಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನವೂ ನಡೆಸಿದರು.






