ಗುಂಡ್ಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಅಂಬ್ಯುಲೆನ್ಸ್ ಕಳವು; ಪ್ರಕರಣ ದಾಖಲು

ಶೇರ್ ಮಾಡಿ

ನೆಲ್ಯಾಡಿ: ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಅಂಬ್ಯುಲೆನ್ಸ್ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಶಿರಾಡಿ ಗ್ರಾಮದ ದೇರಾಣೆ ಮನೆ ನಿವಾಸಿ ಸುರೇಶ್ ಕೆ.ಕೆ. ಅವರಿಗೆ ಸೇರಿದ ಅಂಬ್ಯುಲೆನ್ಸ್ ವಾಹನವಾಗಿದ್ದು, ಡಿ.19ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಮನೆದಿಂದ ಬಂದು ಅಂಬ್ಯುಲೆನ್ಸ್ ಸ್ವಚ್ಛಗೊಳಿಸಿ, ದಿನಪೂರ್ತಿ ತುರ್ತು ಕರೆಗಳಿಗಾಗಿ ಕಾಯುತ್ತಿದ್ದರು. ಆದರೆ ಸಂಜೆ ತನಕ ಯಾವುದೇ ತುರ್ತು ಕರೆಗಳು ಬರದೇ ಇದ್ದುದರಿಂದ, ರಾತ್ರಿ ಸುಮಾರು 8.30 ಗಂಟೆಗೆ ಗುಂಡ್ಯ ಚೆಕ್‌ಪೋಸ್ಟ್ ಬಳಿ ಅಂಬ್ಯುಲೆನ್ಸ್ ನಿಲ್ಲಿಸಿ ಲಾಕ್ ಮಾಡಿ, ತುರ್ತು ಸಂದರ್ಭಗಳಲ್ಲಿ ಬದಲಿ ಚಾಲಕರ ಅನುಕೂಲಕ್ಕಾಗಿ ವಾಹನದ ಕೀಲಿಯನ್ನು ಅಂಬ್ಯುಲೆನ್ಸ್‌ನ ಮ್ಯಾಟ್‌ನ ಕೆಳಗೆ ಇಟ್ಟು ಮನೆಗೆ ತೆರಳಿದ್ದರು. ಆದರೆ, ಡಿ.20ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಮರಳಿ ಬಂದು ನೋಡಿದಾಗ, ಹಿಂದಿನ ರಾತ್ರಿ ನಿಲ್ಲಿಸಿದ್ದ ಅಂಬ್ಯುಲೆನ್ಸ್ ವಾಹನ ಸ್ಥಳದಲ್ಲಿಲ್ಲದೆ ಕಳವಾಗಿರುವುದು ಬೆಳಕಿಗೆ ಬಂದಿದೆ.

ಡಿ.19ರಂದು ರಾತ್ರಿ 8.30 ಗಂಟೆಯಿಂದ ಡಿ.20ರ ಬೆಳಿಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಅಂಬ್ಯುಲೆನ್ಸ್ ವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳವಾದ ಅಂಬ್ಯುಲೆನ್ಸ್ ವಾಹನದ ಅಂದಾಜು ಮೌಲ್ಯ ಸುಮಾರು ₹75,000 ಆಗಿರುತ್ತದೆ ಎನ್ನಲಾಗಿದೆ.

ಈ ಸಂಬಂಧ ಸುರೇಶ್ ಕೆ.ಕೆ. ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಳವು ಆದ ವಾಹನ ಹಾಸನ ಸಮೀಪ ಅಪಘಾತಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

  •  

Leave a Reply

error: Content is protected !!