ಕಡಬ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವ-ಉದ್ಯೋಗ ಕೌಶಲ್ಯಾಭಿವೃದ್ಧಿ ತರಬೇತಿ

ಶೇರ್ ಮಾಡಿ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕಿನ ವತಿಯಿಂದ ಸ್ವ-ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ ಸದಸ್ಯರಿಗೆ ಸ್ವ-ಉದ್ಯೋಗ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವು ಕಡಬದ ದುರ್ಗಾಂಬಿಕಾ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್ ಅವರು ಉದ್ಘಾಟಿಸಿ, ಶ್ರೀ ಕ್ಷೇತ್ರದ ಮೂಲಕ ಸ್ವ-ಉದ್ಯೋಗಕ್ಕೆ ಪೂರಕವಾಗಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳು, ತರಬೇತಿ ಹಾಗೂ ಆರ್ಥಿಕ ಬೆಂಬಲ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು. ಸ್ವಾವಲಂಬನೆಯತ್ತ ಯುವಕರು ಹಾಗೂ ಮಹಿಳೆಯರು ಮುಂದಾಗಬೇಕೆಂದು ಅವರು ಕರೆ ನೀಡಿ, ತರಬೇತಿಗಾರರಿಗೆ ಶುಭ ಹಾರೈಸಿದರು.

ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕರಾದ ಕರುಣಾಕರ್ ಜೈನ್ ಅವರು ಫಲಾನುಭವಿಗಳಿಗೆ ಮಾರ್ಗದರ್ಶನ ನೀಡುತ್ತಾ, ಯಶಸ್ವಿ ಉದ್ಯಮಿಯಾಗಲು ಅಗತ್ಯವಾದ ಕೌಶಲ್ಯಗಳು, ವ್ಯವಹಾರ ನಿರ್ವಹಣಾ ತಂತ್ರಗಳು ಹಾಗೂ ಆಧುನಿಕತೆಗೆ ತಕ್ಕಂತೆ ಉದ್ಯಮವನ್ನು ರೂಪಿಸಿಕೊಂಡು ಹೋಗುವ ವಿಧಾನಗಳ ಕುರಿತು ಉಪನ್ಯಾಸ ನೀಡಿದರು.

ಸಿಡ್ಬಿ ಪ್ರಾಯಸ್ ಯೋಜನೆಯ ಯೋಜನಾಧಿಕಾರಿಗಳಾದ ಅನುಷಾ ರೈ ಅವರು ಸ್ವ-ಉದ್ಯೋಗ ಆರಂಭಿಸಲು ಲಭ್ಯವಿರುವ ಸಿಡ್ಬಿ ಪ್ರಗತಿ ನಿಧಿ, ಸಾಲ ಸೌಲಭ್ಯಗಳು ಹಾಗೂ ಅವುಗಳನ್ನು ಪಡೆಯುವ ಪ್ರಕ್ರಿಯೆಗಳ ಬಗ್ಗೆ ವಿವರಿಸಿದರು.

ಪತ್ರಕರ್ತ ನಾಗರಾಜ ಎನ್.ಕೆ. ಅವರು ಮಾತನಾಡಿ, ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದು ಸ್ವ-ಉದ್ಯೋಗ ಆರಂಭಿಸಿ ಯಶಸ್ಸು ಕಂಡ ತಮ್ಮ ಅನುಭವವನ್ನು ಹಂಚಿಕೊಂಡು, ತರಬೇತಿ ಹಾಗೂ ಶಿಸ್ತಿನ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ವ-ಉದ್ಯೋಗ ನಡೆಸುತ್ತಿರುವ ಫಲಾನುಭವಿಗಳು, ಹಣಕಾಸು ಪ್ರಬಂಧಕರು, ಜ್ಞಾನವಿಕಾಸ ಸಮನ್ವಯಾಧಿಕಾರಿ, ಕಡಬ ತಾಲೂಕಿನ ಮೇಲ್ವಿಚಾರಕರು ಹಾಗೂ ಇತರರು ಉಪಸ್ಥಿತರಿದ್ದರು. ಕಡಬ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತಿಸಿದರು. ಕಡಬ ವಲಯದ ಮೇಲ್ವಿಚಾರಕ ವಿಜೇಶ್ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

  •  

Leave a Reply

error: Content is protected !!