ನೇರ್ಲ–ಇಚ್ಲಂಪಾಡಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಶೇರ್ ಮಾಡಿ

ನೆಲ್ಯಾಡಿ: 2025–26ನೇ ಶೈಕ್ಷಣಿಕ ವರ್ಷದ ನೂಜಿಬಾಳ್ತಿಲ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರ್ಲ–ಇಚ್ಲಂಪಾಡಿಯಲ್ಲಿ ಬುಧವಾರ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಕೌಕ್ರಾಡಿ ಗ್ರಾಮ ಪಂಚಾಯತಿ ಸದಸ್ಯೆ ಡೈಸಿ ವರ್ಗಿಸ್ ಉದ್ಘಾಟಿಸಿ, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಇಂತಹ ಕಲಿಕಾ ಹಬ್ಬಗಳು ಮಕ್ಕಳಲ್ಲಿ ಕಲಿಕೆಯ ಮೇಲಿನ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತ ಬಿಜೇರು ವಹಿಸಿ ಮಾತನಾಡಿದ ಅವರು ನೇರ್ಲ–ಇಚ್ಲಂಪಾಡಿ ಶಾಲೆಯ ಶ್ರೇಯೋಭಿವೃದ್ಧಿಗೆ ಶಿಕ್ಷಕರು, ಪೋಷಕರು ಹಾಗೂ ಊರಿನ ಜನರ ಸಹಕಾರ ಶ್ಲಾಘನೀಯ. ಮಕ್ಕಳ ಕಲಿಕಾ ಪ್ರಗತಿಗಾಗಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್. ಗೌಡ ಮಾತನಾಡಿ ಶಿಕ್ಷಣವೇ ಸಮಾಜದ ಬಲವಾದ ಆಸ್ತಿ, ಮಕ್ಕಳಲ್ಲಿ ಬುನಾದಿ ಸಾಮರ್ಥ್ಯ ಹಾಗೂ ಸಂಖ್ಯಾಜ್ಞಾನವನ್ನು ಚಟುವಟಿಕೆ ಆಧಾರಿತವಾಗಿ ಬೆಳೆಸುವ ಪ್ರಯತ್ನಗಳು ಭವಿಷ್ಯದ ಸಮರ್ಥ ನಾಗರಿಕರನ್ನು ರೂಪಿಸುತ್ತವೆ. ಸರ್ಕಾರಿ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿಗೆ ವಿಶೇಷವಾಗಿ ಸಹಕರಿಸಿದ ನೇರ್ಲ ಕ್ರಿಕೆಟರ್ಸ್ ಇಚ್ಲಂಪಾಡಿ, ಸುರೇಶ್ ಬಿಜೇರು, ಶಾಂತರಾಮ ಕುಡಾಲ, ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ವಿನೋದ್, ನಿತ್ಯಾನಂದ ಉಮೇಸಾಗು, ಯೋಧ ಸಂತೋಷ್ ನೇರ್ಲ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ನಂದಾ, ಸಿ.ಆರ್.ಪಿ ಗಣೇಶ್ ನಡುವಾಲು, ಮುಖ್ಯಶಿಕ್ಷಕ ಡಾ. ಗಿರೀಶ್ ಉಪಸ್ಥಿತರಿದ್ದರು.

ಶಿಕ್ಷಕಿ ಆಥಿರಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸೌಮ್ಯ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೂಜಿಬಾಳ್ತಿಲ ಕ್ಲಸ್ಟರ್‌ನ 6 ಸರ್ಕಾರಿ ಶಾಲೆಗಳ ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದರು.

ಬುನಾದಿ ಸಾಮರ್ಥ್ಯ ಮತ್ತು ಸಂಖ್ಯಾಜ್ಞಾನ ಕುರಿತ ಚಟುವಟಿಕೆ ಆಧಾರಿತ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.

Leave a Reply

error: Content is protected !!