ನೆಲ್ಯಾಡಿಯಲ್ಲಿ ಸಂಶಯಾಸ್ಪದ ಸಾವು – ಮರಣೋತ್ತರ ವರದಿ ಕೊಲೆ ಸುಳಿವು

ಶೇರ್ ಮಾಡಿ

ನೆಲ್ಯಾಡಿ: ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿ ಎಂಬಲ್ಲಿ ಕೆ.ಸಿ. ವರ್ಗೀಸ್ (73) ಅವರ ಸಂಶಯಾಸ್ಪದ ಮರಣ ಪ್ರಕರಣ, ಮರಣೋತ್ತರ ಶವಪರೀಕ್ಷೆಯ ವರದಿ ಬಂದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣವಾಗಿ ದಾಖಲಾಗಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಫೆ.8ರಂದು ಸಂಜೆ 7.30 ರಿಂದ ರಾತ್ರಿ 11 ಗಂಟೆಯ ಅವಧಿಯಲ್ಲಿ ಮನೆಯಲ್ಲೊಬ್ಬರೇ ಇದ್ದ ವರ್ಗೀಸ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ತಲೆಯ ಹಾಗೂ ಕೈ–ಕಾಲುಗಳಿಗೆ ಭಾರವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುವುದು ಮರಣೋತ್ತರ ವರದಿಯಲ್ಲಿ ಸ್ಪಷ್ಟವಾಗಿದೆ.

ಮೃತರ ಪುತ್ರ ಕೆ.ವಿ. ತೋಮಸ್ ಅವರು ನೀಡಿರುವ ದೂರಿನಲ್ಲಿ, ತಾಯಿಯ ಚಿಕಿತ್ಸೆಯ ನಿಮಿತ್ತ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ಸಾದಾಗ ಮನೆಯಲ್ಲಿ ಬಾಗಿಲು ತೆರೆಯಲ್ಪಟ್ಟಿರುವುದು ಹಾಗೂ ತಂದೆ ಮಂಚದ ಕೆಳಗೆ ರಕ್ತ ಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾದರೂ, ವೈದ್ಯರು ಮೃತರೆಂದು ಘೋಷಿಸಿದ್ದಾರೆ.

ಮಣಿಪಾಲ ಘಟಕದ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ, ಮೃತನಿಗೆ ತಲೆಯೊಂದಿಗೆ ದೇಹದ ವಿವಿಧ ಭಾಗಗಳ ಮೇಲೂ ಬಹು ಗಾಯಗಳು ಕಂಡುಬಂದಿದ್ದು, “ಬ್ಲಂಟ್ ಫೋರ್ಸ್ ಅಸಾಲ್ಟ್‌ನಿಂದಾದ ಗಾಯಗಳು ಮರಣಕ್ಕೆ ಕಾರಣ” ಎಂದು ವೈದ್ಯರು ಅಭಿಪ್ರಾಯ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಹಿಂದಿನ ಯು.ಡಿ.ಆರ್. ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದ್ದು, ಅಪರಿಚಿತ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.

Leave a Reply

error: Content is protected !!