ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಕಿಂಡರ್ ಗಾರ್ಟನ್ ಪದವಿ ಪ್ರದಾನ ಸಮಾರಂಭ

ಶೇರ್ ಮಾಡಿ
ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಕಿಂಡರ್ ಗಾರ್ಟನ್ ಪದವಿ ಪ್ರದಾನ ಸಮಾರಂಭ

ನೆಲ್ಯಾಡಿ: ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನ ಕಿಂಡರ್ ಗಾರ್ಟನ್ ವಿಭಾಗದ ಯುಕೆಜಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಚಿಲಂಪಾಡಿ ಬೆಥನಿ ಕಾನ್ವೆಂಟ್‌ನ ಸುಪೀರಿಯರ್ ಸಿಸ್ಟರ್ ಡಾ.ಕಿರಣ್ ಅವರು, ಎಲ್‌ಕೆಜಿ ಹಾಗೂ ಯುಕೆಜಿ ಶಿಕ್ಷಣವು ಮಕ್ಕಳ ಪ್ರಾಥಮಿಕ ಶಿಕ್ಷಣದ ಬುನಾದಿಯಾಗಿದೆ ಎಂದು ಹೇಳಿದರು. ಈ ಹಂತದಲ್ಲಿ ಮಕ್ಕಳು ಆಟದೊಂದಿಗೆ ಪಾಠವನ್ನು ಕಲಿಯುತ್ತಾ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಎರಡನೇ ತಾಯಿಯಂತೆ ಮಕ್ಕಳಿಗೆ ಪಾಠ ಬೋಧನೆ ಮಾಡುವುದರಿಂದ ಮಕ್ಕಳಿಗೆ ಮನೆಯ ಪ್ರೀತಿಯ ವಾತಾವರಣವೇ ಶಾಲೆಯಲ್ಲಿಯೂ ಸಿಗುತ್ತದೆ ಎಂದು ತಿಳಿಸಿದರು. ಎಲ್ಲಾ ಹೆತ್ತವರು ಶಿಕ್ಷಕರನ್ನು ಗೌರವಿಸಿ ಸಹಕಾರ ನೀಡಬೇಕೆಂದು ಅವರು ಸಲಹೆ ನೀಡಿದರು.

ಅತಿಥಿಯಾಗಿ ಆಗಮಿಸಿದ್ದ ಮಾನಸಿಕ, ಆಧ್ಯಾತ್ಮಿಕ, ಕುಟುಂಬ ಮತ್ತು ವೈಯಕ್ತಿಕ ಮಾರ್ಗದರ್ಶಕ ರೆ.ಫಾ.ಡಾ. ಜೋಯ್ ಸೆಬಾಸ್ಟಿಯನ್ ಅವರು ಮಕ್ಕಳೊಂದಿಗೆ ಬೆರೆತು ಕಥೆಗಳ ಮೂಲಕ ತಮ್ಮ ಮಾತು ಪ್ರಾರಂಭಿಸಿ, ಹೆತ್ತವರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾವಲುಗಾರರಂತೆ ಕೆಲಸ ಮಾಡುತ್ತಾರೆ. ಈ ರೀತಿಯ ಕಾಳಜಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಗತ್ಯ ಎಂದು ಹೇಳಿದರು. ಯುಕೆಜಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಶುಭಾಶಯ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಹ ಸಂಚಾಲಕ ಡೀಕನ್ ಜಾರ್ಜ್ ಅವರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಬಾಲ್ಯದ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಬಾಲ್ಯದಲ್ಲಿ ಶಿಕ್ಷಕರು ತಿದ್ದಿ ತೀಡಿದ ಶಿಕ್ಷಣವೇ ಮುಂದಿನ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಏರಲು ಕಾರಣವಾಗುತ್ತದೆ ಎಂದು ತಮ್ಮ ಬಾಲ್ಯದ ಶಿಕ್ಷಕರನ್ನು ನೆನಪಿಸಿಕೊಂಡರು.

ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಿರಣ್ ಪುತ್ತಿಲ ಅವರು ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿದರು. ನಂತರ ಯುಕೆಜಿಯಿಂದ ಮೊದಲನೇ ತರಗತಿಗೆ ಪದೋನ್ನತಿ ಪಡೆದ ಪುಟಾಣಿಗಳಿಗೆ ಪದವಿ ಪ್ರಮಾಣಪತ್ರ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.

ಸೈಂಟ್ ಆಂಟನೀಸ್ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಶ್ರೀಧರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಲಕರು, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಿಂಡರ್ ಗಾರ್ಟನ್ ಮುಖ್ಯಸ್ಥೆ ವಿನೀತಾ ತಂಗಚ್ಚನ್ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ವಂದಿಸಿದರು. ಶಿಕ್ಷಕಿ ಸಜಿನಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

error: Content is protected !!