





ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರಿ ಸಂಘ ನಿ. ಯಲ್ಲಿ ಸಂಘದ ವತಿಯಿಂದ ಸನ್ಮಾನ ಹಾಗೂ ಶುಭಾಶಯ ಕಾರ್ಯಕ್ರಮವನ್ನು ಆತ್ಮೀಯವಾಗಿ ಆಯೋಜಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಜವಾಬ್ದಾರಿಗಳನ್ನು ಹೊತ್ತು ಸೇವೆ ಸಲ್ಲಿಸುತ್ತಿರುವ ಮಹಿಳಾ ನಾಯಕಿಯರನ್ನು ಅಭಿನಂದಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷರಾದ ಉಷಾ ಅಂಚನ್ ಅವರು ಕೊಣಾಲು- ಅರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆ, ಕಾಮಧೇನು ಮಹಿಳಾ ಸಹಕಾರಿ ಸಂಘದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಲವು ಸಂಘ-ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಉಷಾ ಅಂಚನ್ ಅವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉನ್ನತ ಸ್ಥಾನಗಳಿಗೆ ಏರಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಶುಭ ಹಾರೈಸಿದರು.
ಅದೇ ರೀತಿ ಸಂಘದ ನಿರ್ದೇಶಕರಾದ ವಾರಿಜಾಕ್ಷಿ ಅವರು ಕೊಣಾಲು- ಅರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಹ ಸಂಘದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಮಹಿಳೆಯರು ಸಹಕಾರ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದು, ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವುದು ಸಂತಸದ ವಿಚಾರವೆಂದು ಮಾತನಾಡಿದವರು.
ಇದೇ ಸಂದರ್ಭದಲ್ಲಿ ಸಂಘದ ಸಹೋದ್ಯೋಗಿಯಾದ ಜಿನ್ಸಿ ಅವರಿಗೆ ಸಾಂಪ್ರದಾಯಿಕವಾಗಿ ಸೀಮಂತ ಕಾರ್ಯಕ್ರಮವನ್ನು ಕೂಡ ಏರ್ಪಡಿಸಲಾಯಿತು. ಸಹೋದ್ಯೋಗಿಗಳು ಹಾಗೂ ಸದಸ್ಯರು ಜಿನ್ಸಿ ಅವರಿಗೆ ಶುಭ ಹಾರೈಸಿ ಆರೋಗ್ಯಕರ ಹಾಗೂ ಸುಖಮಯ ಭವಿಷ್ಯವನ್ನು ಕೋರಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರು, ಸಿಬ್ಬಂದಿಗಳು, ಸೇವಾ ಪ್ರತಿನಿಧಿಗಳು, ಪಿಗ್ಮಿ ಸಂಗ್ರಹಕಾರರು ಹಾಗೂ ಅನೇಕ ಗ್ರಾಹಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.





