ಶಿರಾಡಿ ಗುಂಡ್ಯ ಚೆಕ್ ಪೋಸ್ಟ್‌ನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಪತ್ತೆ – 4 ಹೋರಿಗಳ ರಕ್ಷಣೆ, ಟೆಂಪೋ ವಶಕ್ಕೆ

ಶೇರ್ ಮಾಡಿ
ಶಿರಾಡಿ ಗುಂಡ್ಯ ಚೆಕ್ ಪೋಸ್ಟ್‌ನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಪತ್ತೆ – 4 ಹೋರಿಗಳ ರಕ್ಷಣೆ, ಟೆಂಪೋ ವಶಕ್ಕೆ

ನೆಲ್ಯಾಡಿ: ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದು, ನಾಲ್ಕು ಹೋರಿಗಳನ್ನು ರಕ್ಷಿಸಿ ಗೂಡ್ಸ್ ಟೆಂಪೋವನ್ನು ವಶಕ್ಕೆ ಪಡೆದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಬುಧವಾರ ಬೆಳಿಗ್ಗೆ ಸುಮಾರು 5.45 ಗಂಟೆ ವೇಳೆಗೆ ಗುಂಡ್ಯ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹಾಸನ ಕಡೆಯಿಂದ ಬರುತ್ತಿದ್ದ ಗೂಡ್ಸ್ ಟೆಂಪೋವನ್ನು ತಡೆದು ಪರಿಶೀಲಿಸಿದರು. ಈ ವೇಳೆ ಟೆಂಪೋದಲ್ಲಿ ಜಾನುವಾರುಗಳಿರುವುದು ಗಮನಕ್ಕೆ ಬಂದಿದ್ದು, ತಕ್ಷಣವೇ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪ್ರಭಾರ ಉಪ ನಿರೀಕ್ಷಕರು ಐಪಿಎಸ್‌ ಅನನ್ಯ ಶ್ರೀವಸ್ತವ್ ಅವರಿಗೆ ಮಾಹಿತಿ ನೀಡಲಾಯಿತು. ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ, ಯಾವುದೇ ಪರವಾನಿಗೆ ಇಲ್ಲದೇ ಹಾಸನ ಜಿಲ್ಲೆಯಿಂದ ಕೇರಳ ರಾಜ್ಯದ ಕಾಸರಗೋಡಿಗೆ ಮಾಂಸ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿದ್ದದ್ದು ಬೆಳಕಿಗೆ ಬಂದಿದೆ.

ಟೆಂಪೋ ಮೇಲಿದ್ದ ಟರ್ಪಲ್ ತೆರವುಗೊಳಿಸಿ ಪರಿಶೀಲನೆ ನಡೆಸಿದಾಗ, ಟೆಂಪೋದ ಒಳಭಾಗದಲ್ಲಿ ಒಂದು ಆಳಿನಷ್ಟು ಎತ್ತರದಲ್ಲಿ ಹಲಗೆ ಹಾಕಿ ಅದರ ಕೆಳಭಾಗದಲ್ಲಿ ನಾಲ್ಕು ಹೋರಿಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಟೆಂಪೋದಲ್ಲಿ ಬಿಳಿ ಬಣ್ಣದ 2 ಹೋರಿಗಳು, ಕಪ್ಪು ಬಣ್ಣದ 1 ಹೋರಿ ಹಾಗೂ ಬೂದು ಬಣ್ಣದ 1 ಹೋರಿ ಸೇರಿದಂತೆ ಒಟ್ಟು ನಾಲ್ಕು ಹೋರಿಗಳನ್ನು ಪತ್ತೆಹಚ್ಚಲಾಗಿದೆ.

ಒಂದೊಂದು ಹೋರಿಯ ಅಂದಾಜು ಮೌಲ್ಯ ಸುಮಾರು ₹50,000 ಇದ್ದು, ಒಟ್ಟು ₹2,00,000 ಮೌಲ್ಯದ ಹೋರಿಗಳು ಪತ್ತೆಯಾಗಿವೆ. ಸಾಗಾಟಕ್ಕೆ ಬಳಸಿದ್ದ ಗೂಡ್ಸ್ ಟೆಂಪೋದ ಅಂದಾಜು ಮೌಲ್ಯ ₹8,00,000 ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕು ಗಂಡಸಿ ಹೋಬಳಿಯ ನಿವಾಸಿ ಕುಮಾರ್ (49) ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಹಾಗೂ ಪ್ರಾಣಿ ಹಿಂಸಾ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!