




ಕೊಕ್ಕಡ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಬರ್ಚಿನಹಳ್ಳಿ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಸಕಲೇಶಪುರದ ಬಳಿ ನಡೆದ ಮದುವೆಯ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಸನದಿಂದ ಉಜಿರೆ ಕಡೆಗೆ ನಾಲ್ವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಧರ್ಮಸ್ಥಳದಿಂದ ಬೆಂಗಳೂರಿನ ಮೂಲಕ ತಿರುಪತಿಗೆ ತೆರಳುತ್ತಿದ್ದ ರಾಜಹಂಸ ಬಸ್ ಹಾಗೂ ಕಾರಿನ ನಡುವೆ ಬರ್ಚಿನಹಳ್ಳಿ ಸಮೀಪ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರಲ್ಲಿ ಕೊಕ್ಕಡದಲ್ಲಿ ಎಸ್.ಆರ್. ಆಯಿಲ್ ಮಿಲ್ ಉದ್ಯಮವನ್ನು ನಡೆಸುತ್ತಿದ್ದ ಶಿಶಿಲ ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ ಕೂಡ ಸೇರಿದ್ದಾರೆ. ಮೃತ ಚಂದ್ರಶೇಖರ ಗೌಡ ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಿಗ್ಗೆ ಕೊಕ್ಕಡದಲ್ಲಿರುವ ಅವರ ಮಾಲಕತ್ವದ ಎಸ್.ಆರ್. ಆಯಿಲ್ ಮಿಲ್ ಆವರಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಗ್ರಾಮಸ್ಥರು, ಬಂಧುಗಳು ಹಾಗೂ ಹಿತೈಷಿಗಳು ಆಗಮಿಸಿ ಅಂತಿಮ ದರ್ಶನ ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಕೊಕ್ಕಡ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಆಲಂಬಿಲ, ಕೊಕ್ಕಡ ಪಂಚಮಿ ಆಯುರ್ಧಾಮ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಬಿ.ಮೋಹನ್ ದಾಸ್ ಗೌಡ, ನೆಲ್ಯಾಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ರವಿಪ್ರಸಾದ್ ಬಲ್ಯ, ಕೊಕ್ಕಡ ರಕ್ತೇಶ್ವರಿ ಪೆಟ್ರೋ ಪಾಯಿಂಟ್‌ನ ಮಾಲಕ ನಾರಾಯಣ ಗೌಡ ಸೇರಿದಂತೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರು, ಕೊಕ್ಕಡದ ವರ್ತಕರು ಹಾಗೂ ಅನೇಕರು ಮೃತರ ಅಂತಿಮ ದರ್ಶನ ಪಡೆದರು.
ಇದೇ ವೇಳೆ ಮೃತರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಕೊಕ್ಕಡದ ಎಲ್ಲಾ ವರ್ತಕ ಬಂಧುಗಳು ಬೆಳಿಗ್ಗೆ ಸುಮಾರು ಒಂದು ಗಂಟೆಗಳ ಕಾಲ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.





