ಕಾಮಕಾಂಡ ಆರೋಪಕ್ಕೆ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು: ಮಹಿಳಾ ಆಯೋಗ ಸುಮೋಟೋ ಕೇಸ್, ಇಲಾಖೆಯಲ್ಲಿ ಸಂಚಲನ

ಶೇರ್ ಮಾಡಿ
ಕಾಮಕಾಂಡ ಆರೋಪಕ್ಕೆ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು: ಮಹಿಳಾ ಆಯೋಗ ಸುಮೋಟೋ ಕೇಸ್, ಇಲಾಖೆಯಲ್ಲಿ ಸಂಚಲನ

ಮಂಗಳೂರು: ಕೌಟುಂಬಿಕ ಕಲಹದ ದೂರು ನೀಡಲು ಬಂದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.

ಮಹಿಳೆಯರನ್ನು ಅಸಭ್ಯವಾಗಿ ಮಂಚಕ್ಕೆ ಕರೆದಿರುವ ಬಗ್ಗೆ ಸಂತ್ರಸ್ತೆಯ ಆರೋಪ ಹೊರಬಿದ್ದ ಬೆನ್ನಲ್ಲೇ, ಪ್ರಕರಣವು ದೊಡ್ಡ ಚರ್ಚೆಗೆ ಗ್ರಾಸವಾಯಿತು. ಈ ಸಂಬಂಧ ಹೊರಬಂದ ಆಡಿಯೋ ಹಾಗೂ ವಿಡಿಯೋಗಳ ಆಧಾರದ ಮೇಲೆ ಆರೋಪ ಗಂಭೀರವಾಗಿದ್ದು, ಮಹಿಳೆಯರೊಂದಿಗೆ ಅನುಚಿತ ವರ್ತನೆ ನಡೆಸಿರುವುದು ಬೆಳಕಿಗೆ ಬಂದಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಹಿಳಾ ಆಯೋಗವು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು, ವರದಿ ಸಲ್ಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ಇದರ ಜೊತೆಗೆ ಪ್ರಕರಣದ ತನಿಖೆ ನಡೆಸಿ ವರದಿ ನೀಡುವ ಜವಾಬ್ದಾರಿಯನ್ನು ಎಸಿಪಿ ಶ್ರೀಕಾಂತ್ ಅವರಿಗೆ ವಹಿಸಲಾಗಿತ್ತು.

ಇದೇ ವೇಳೆ, ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಗೃಹ ಸಚಿವರನ್ನು ಭೇಟಿ ಮಾಡಿ, ಸಂದೇಶ್ ಅವರನ್ನು ಅಮಾನತ್ತಿನಲ್ಲಿಟ್ಟು ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದು, ಇಲಾಖೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದ್ದು, ಹೆಚ್ಚಿನ ವಿವರಗಳು ಹೊರಬರುವ ಸಾಧ್ಯತೆ ಇದೆ.

Leave a Reply

error: Content is protected !!