ಕೋರಮೇರು ಆದಿಮನೆಯಲ್ಲಿ ನವೀಕೃತ ದೈವಸ್ಥಾನ: ಏಪ್ರಿಲ್ 1 ರಿಂದ ದೈವಗಳ ಪ್ರತಿಷ್ಠೆ ಹಾಗೂ ನಡಾವಳಿ ವೈಭವ

ಶೇರ್ ಮಾಡಿ
ಮನೆಯಲ್ಲೇ ಕುಳಿತು ಜಾತಿ, ಆದಾಯ, ನಿವಾಸಿ ದೃಢೀಕರಣ ಪ್ರಮಾಣಪತ್ರ ಪಡೆಯುವ ಸೌಲಭ್ಯ ಜಾರಿ - ಕೃಷ್ಣ ಬೈರೇಗೌಡ
ಇಚ್ಲಂಪಾಡಿ:ಕೋರಮೇರು


ಇಚ್ಲಂಪಾಡಿ:ಕೋರಮೇರು ಕುಟುಂಬದ ಆದಿಮನೆಯಲ್ಲಿ ನವೀಕರಿಸಿದ ದೈವಸ್ಥಾನದಲ್ಲಿ ಶ್ರೀ ಹಳ್ಳತ್ತಾಯ, ಧರ್ಮದೈವ ಶ್ರೀ ರುದ್ರಚಾಮುಂಡಿ, ಗುತ್ತಿನ ದೈವ ಪಿಲಿಚಾಮುಂಡಿ, ಶ್ರೀ ಶಿರಾಡಿ ದೈವ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ನಡಾವಳಿ (ನೇಮೋತ್ಸವ) ಕಾರ್ಯಕ್ರಮಗಳು ಏಪ್ರಿಲ್ 1, 2026 ರಿಂದ ಏಪ್ರಿಲ್ 5, 2026 ರವರೆಗೆ ಅತ್ಯಂತ ಭಕ್ತಿ-ಭಾವಗಳಿಂದ ನಡೆಯಲಿವೆ.

ವಾಸ್ತು ಶಿಲ್ಪಿಗಳಾದ ಶ್ರೀ ಪ್ರಸಾದ್ ಮುನಿಯಂಗಲ ಅವರ ಮಾರ್ಗದರ್ಶನದಲ್ಲಿ ಕಂಗೊಳಿಸುತ್ತಿರುವ ನೂತನ ದೈವಸ್ಥಾನದಲ್ಲಿ, ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ಭಾರ್ಗವ ಪೌರೋಹಿತ್ಯ ಹಾಗೂ ವೈದಿಕ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಪ್ರಧಾನ ದೈವಗಳೊಂದಿಗೆ ಪರಿವಾರ ದೈವಗಳಾದ ವರ್ಣಾರ ಪಂಜುರ್ಲಿ, ಸತ್ಯದೇವತೆ, ಗುಳಿಗ, ಕಲ್ಲುರ್ಟಿ, ಭೂಮಿಯ ಪಂಜುರ್ಲಿ, ಬಿರ್ಮೆರ್, ಪುರುಷ ದೈವ, ಗಿಣೆರಾಮ ಹಾಗೂ ಕುಪ್ಪೆ ಪಂಜುರ್ಲಿ ದೈವಗಳ ಪ್ರತಿಷ್ಠಾಪನೆ ನೆರವೇರಲಿದೆ.

ಪ್ರತಿಷ್ಠಾ ಮುಹೂರ್ತ:
ಏಪ್ರಿಲ್ 2ರ ಗುರುವಾರ ಪೂರ್ವಾಹ್ನ 9.24ಕ್ಕೆ ಹಾಗೂ ಏಪ್ರಿಲ್ 3ರ ಶುಕ್ರವಾರ ಪೂರ್ವಾಹ್ನ 9.21ರ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ತಂಬಿಲ ಸೇವೆ ನೆರವೇರಲಿದೆ.

ವೈದಿಕ ಕಾರ್ಯಕ್ರಮಗಳ ವಿವರ:
ಏಪ್ರಿಲ್ 1ರ (ಬುಧವಾರ) ಬೆಳಿಗ್ಗೆ 8 ಗಂಟೆಗೆ ನಾಗತಂಬಿಲದೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಸಂಜೆ ಆಲಯ ಪರಿಗ್ರಹ, ವಾಸ್ತು ಹೋಮ, ದಿಕ್ಪಾಲ ಬಲಿ, ಬಿಂಬಾಧಿವಾಸ ರಕ್ಷೆ ಮುಂತಾದ ಪೂಜೆಗಳು ನಡೆಯಲಿವೆ. ಏಪ್ರಿಲ್ 2 ಮತ್ತು 3 ರಂದು ಬೆಳಿಗ್ಗೆ ಗಣಹೋಮ, ದೈವಗಳ ಪ್ರತಿಷ್ಠೆ, ಮತ್ತು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನೆರವೇರಲಿದೆ.

ನಡಾವಳಿ (ನೇಮೋತ್ಸವ) ಕಾರ್ಯಕ್ರಮಗಳು:
ಏಪ್ರಿಲ್ 4ರ ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಶ್ರೀ ಹಳ್ಳತ್ತಾಯ ಮತ್ತು ಪರಿವಾರ ದೈವಗಳ ಭಂಡಾರ ಇಳಿಸಿ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಶ್ರೀ ರುದ್ರಚಾಮುಂಡಿ ಹಾಗೂ ಗುತ್ತಿನ ದೈವ ಪಿಲಿಚಾಮುಂಡಿ ದೈವಗಳ ಭಂಡಾರ ಇಳಿಸಲಾಗುವುದು. ಸಂಜೆ 4 ಗಂಟೆಗೆ ಶ್ರೀ ಶಿರಾಡಿ ದೈವದ ಭಂಡಾರವನ್ನು ಆದಿಮನೆಗೆ ತಂದು ಸಂಜೆ 5 ರಿಂದ ನೇಮೋತ್ಸವ ಆರಂಭಗೊಳ್ಳಲಿದೆ. ಭಾನುವಾರ (ಏ. 5) ಬೆಳಿಗ್ಗೆ 6 ಗಂಟೆಯಿಂದ ಧರ್ಮದೈವ ಶ್ರೀ ರುದ್ರಚಾಮುಂಡಿ ಮತ್ತು ಶ್ರೀ ಶಿರಾಡಿ ದೈವದ ನೇಮೋತ್ಸವ ಹಾಗೂ ಮಧ್ಯಾಹ್ನ 2 ಗಂಟೆಗೆ ಗುಳಿಗ ದೈವದ ನೇಮೋತ್ಸವ ಜರುಗಲಿದೆ.

ಇಚ್ಲಂಪಾಡಿ:ಕೋರಮೇರು

ಎಲ್ಲಾ ದಿನಗಳಂದು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಭಕ್ತಾದಿಗಳು ಸಕುಟುಂಬಿಕರಾಗಿ ಆಗಮಿಸಿ ದೈವಗಳ ಗಂಧಪ್ರಸಾದ ಸ್ವೀಕರಿಸಬೇಕೆಂದು ಕೋರಮೇರು ಆದಿಮನೆಯ ಯಜಮಾನರಾದ ಶ್ರೀಮತಿ ಮತ್ತು ರಾಮಕೃಷ್ಣ ಗೌಡ, ಹಿರಿಯರಾದ ಲಿಂಗಪ್ಪ ಗೌಡ, ಸಮಸ್ತ ಕುಟುಂಬಸ್ಥರು ಹಾಗೂ ವ್ಯವಸ್ಥಾಪನಾ ಸಮಿತಿ ವಿನಂತಿಸಿದೆ.

Leave a Reply

error: Content is protected !!