





ಬೆಳ್ತಂಗಡಿ: ಈಜಲು ನೀರಿಗಿಳಿದ ಬಾಲಕನೋರ್ವ ಮುಳುಗಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ನಡೆ ಗ್ರಾಮದ ಅಂತ್ರಾಯಪಲ್ಕೆ ಪ್ರದೇಶದಲ್ಲಿ ಮಾ.28ರಂದು ಸಂಜೆ ಸಂಭವಿಸಿದೆ.
ಉಜಿರೆ ಗ್ರಾಮದ ಕುಂಟಿನಿ ನಿವಾಸಿ ಹಸನಬ್ಬ ಅವರ ಪುತ್ರ ಮಹಮ್ಮದ್ ಹಫೀಸ್(14) ಮೃತಪಟ್ಟ ಬಾಲಕನಾಗಿದ್ದಾನೆ.
ಅಂತ್ರಾಯಪಲ್ಕೆ ಸಮೀಪದ ಅಂತ್ರಾಯ ಗುಂಡಿಗೆ ಈಜಲು ತೆರಳಿದ್ದ ನಾಲ್ವರು ಬಾಲಕರ ಪೈಕಿ ಮಹಮ್ಮದ್ ಹಫೀಸ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈಜುವ ವೇಳೆ ಏಕಾಏಕಿ ಆಳವಾದ ಭಾಗಕ್ಕೆ ಹೋಗಿರುವ ಸಾಧ್ಯತೆ ವ್ಯಕ್ತವಾಗಿದ್ದು, ಸ್ನೇಹಿತರು ಗಮನಿಸುವಷ್ಟರಲ್ಲಿ ಬಾಲಕ ನೀರಿನಲ್ಲಿ ಕಾಣೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ತಿಳಿದ ತಕ್ಷಣ ಸ್ಥಳೀಯರು ಶೋಧ ಕಾರ್ಯ ನಡೆಸಿ ಬಳಿಕ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.




