





ಮಂಗಳೂರು: ನೆಲ್ಯಾಡಿ ಮೂಲದ ಯುವಕ ಸುದೀಪ್ ರೈ ಸಾವಿನ ಪ್ರಕರಣವು ಹೊಸ ತಿರುವು ಪಡೆಯುತ್ತಿದ್ದಂತೆ, ಮೃತನ ಪೋಷಕರು ಗಂಭೀರ ಆರೋಪಗಳನ್ನು ಹೊರ ಹಾಕಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ಮಂಗಳವಾರ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೃತ ಸುದೀಪ್ ರೈ ಅವರ ತಂದೆ ಬಿ.ದಾಮೋದರ ಅವರು, “ನಮ್ಮ ಮಗನ ಸಾವಿಗೆ ಅವನ ಪತ್ನಿ ನೀಡಿದ ಮಾನಸಿಕ ಹಿಂಸೆ, ಕಿರುಕುಳ ಹಾಗೂ ಆಹಾರದಲ್ಲಿ ವಿಷ ನೀಡಿರುವುದೇ ನೇರ ಕಾರಣವಾಗಿದೆ” ಎಂದು ತೀವ್ರ ಆರೋಪಿಸಿದರು.
“ಮಾ.17ರಂದು ನೆಲ್ಯಾಡಿ ಪೇಟೆಯಲ್ಲಿ ನಡೆದ ಗಲಾಟೆಯೇ ಈ ದುರ್ಘಟನೆಯ ಆರಂಭವಾಗಿದೆ. ಆ ನಂತರ ಆಕೆ ನಮ್ಮ ಮಗನನ್ನು ಕರೆದುಕೊಂಡು ಹೋಗಿ ನಿರಂತರ ಮಾನಸಿಕ ಹಿಂಸೆ ನೀಡಿದ್ದು, ಜೀವ ಬೆದರಿಕೆಯನ್ನೂ ಒಡ್ಡಿದ್ದಾಳೆ. ಇದರಿಂದ ಆತ ಮಾನಸಿಕವಾಗಿ ಕುಗ್ಗಿ, ಬಳಿಕ ಆರೋಗ್ಯ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲೆಯಾಗಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾ.29ರಂದು ಮುಂಜಾನೆ ಮೃತಪಟ್ಟಿದ್ದಾನೆ” ಎಂದು ಎಂದರು.
ಈ ವೇಳೆ ಮಾತನಾಡಿದ ವೇಣುಗೋಪಾಲ್ ಎಂಬವರು ಕೂಡ ಸೌಮ್ಯ ವಿರುದ್ಧ ಗಂಭೀರ ಆರೋಪಗಳನ್ನು ಹೊರಹಾಕಿದರು. “ಸೌಮ್ಯ ನೀಡಿದ ಮಾನಸಿಕ ಕಿರುಕುಳವನ್ನು ನಾನು ಕೂಡ ಅನುಭವಿಸಿದ್ದೇನೆ. ಕಳೆದ ವರ್ಷ ನಮ್ಮ ವಿವಾಹದ ಹಂತಕ್ಕೆ ಬಂದ ಸಂಬಂಧವೇ ಈ ಕಾರಣದಿಂದ ಮುರಿದು ಬಿದ್ದಿತ್ತು. ಆ ಕಿರುಕುಳದಿಂದ ತಪ್ಪಿಸಿಕೊಳ್ಳಲು ನಾನು ಮುಂಬೈಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಮ್ಮ ಸಂಬಂಧ ಮುಂದುವರಿದಿದ್ದರೆ ಇಂದು ಸುದೀಪ್ ರೈ ನ ಸ್ಥಿತಿ ನನ್ನದಾಗಿರುತ್ತಿತ್ತು” ಎಂದು ಹೇಳಿದರು.
ಈ ಪ್ರಕರಣವನ್ನು ಸಾಮಾನ್ಯ ಪ್ರಕರಣವೆಂದು ಪರಿಗಣಿಸದೆ, ಸಂಪೂರ್ಣ ಸತ್ಯಾಂಶ ಬಹಿರಂಗವಾಗುವಂತೆ ಉನ್ನತ ಮಟ್ಟದ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸುದೀಪ್ ರೈಗೆ ನ್ಯಾಯ ಒದಗಿಸಬೇಕು ಎಂದು ಪೋಷಕರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮೃತನ ತಾಯಿ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.




