





ಕೊಕ್ಕಡ : ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳಿಗೇರಿಯಲ್ಲಿ ಕಳೆದ ಸುಮಾರು 6 ವರ್ಷಗಳಿಂದ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಧರ್ ಕೆ.ಎಸ್ ಅವರು ನೆಲ್ಯಾಡಿಯ ಪಿ.ಎಂ ಶ್ರೀ ಶಾಲೆಗೆ ಹಿರಿಯ ಮುಖ್ಯಶಿಕ್ಷಕರಾಗಿ ಮುಂಬಡ್ತಿಗೊಂಡು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಬುಧವಾರದಂದು ಶಾಲಾ ಅಭಿವೃದ್ಧಿ ಸಮಿತಿ, ಪೋಷಕರು ಹಾಗೂ ವಿದ್ಯಾರ್ಥಿಗಳ ವತಿಯಿಂದ ಭಾವುಕ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನವಾಜ್ ಎನ್.ಎಸ್ ವಹಿಸಿ ಮಾತನಾಡಿ, “ಶಾಲೆಯ ಅಭಿವೃದ್ಧಿಗೆ ಶ್ರೀಧರ್ ಅವರು ನೀಡಿದ ಸೇವೆ ಅಮೂಲ್ಯವಾದುದು. ಅವರ ಕಾರ್ಯಪದ್ಧತಿ, ಶಿಸ್ತು ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿ ನಮ್ಮೆಲ್ಲರಿಗೂ ಮಾದರಿಯಾಗಿದೆ. ಇಂತಹ ನಿಷ್ಠಾವಂತ ಶಿಕ್ಷಕರನ್ನು ಕಳೆದುಕೊಳ್ಳುವುದು ನೋವು ತಂದರೂ, ಅವರ ಉನ್ನತ ಹುದ್ದೆಗೆ ಏರಿಕೆ ನಮಗೆ ಹೆಮ್ಮೆಯ ವಿಷಯ,” ಎಂದು ಅಭಿಪ್ರಾಯಪಟ್ಟರು.
ಮುಖ್ಯಶಿಕ್ಷಕ ಶ್ರೀಧರ್ ಕೆ.ಎಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು, “ಹಳ್ಳಿಗೇರಿ ಶಾಲೆಯಲ್ಲಿ ಕಳೆದ ಆರು ವರ್ಷಗಳ ಸೇವೆ ನನ್ನ ಜೀವನದ ಅಮೂಲ್ಯ ಅಧ್ಯಾಯವಾಗಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಶಾಲೆಯನ್ನು ಉತ್ತಮ ಮಟ್ಟಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಇಲ್ಲಿ ಕಂಡ ಆತ್ಮೀಯತೆ ಹಾಗೂ ಒಡನಾಟವನ್ನು ಎಂದಿಗೂ ಮರೆಯಲಾಗದು,” ಎಂದು ಭಾವುಕರಾಗಿ ನುಡಿದರು.
ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಉಮ್ಮರ್ ಬೈಲಂಗಡಿ, ಯೂಸುಫ್ ಹಾಗೂ ಶಿಕ್ಷಕ ಶಶಿರಾಜ್ ಸಂದರ್ಭೋಚಿತವಾಗಿ ಮಾತನಾಡಿ, ಶ್ರೀಧರ್ ಅವರ ಸೇವೆಯನ್ನು ಕೊಂಡಾಡಿ ಭವಿಷ್ಯಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕೊಕ್ಕಡ ಗ್ರಾಮ ಪಂಚಾಯತ್‌ನ ನಿಕಟ ಪೂರ್ವ ಸದಸ್ಯೆ ವನಜಾಕ್ಷಿ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಹೇಮಾವತಿ, ನೂತನ ಮುಖ್ಯಶಿಕ್ಷಕರಾಗಿ ಆಗಮಿಸಿದ ರೊನಾಲ್ಡ್ ಕೆನ್ಯೂಟ್ ಮೆನೇಜಸ್, ಹಳ್ಳಿಂಗೇರಿ ಗೋಶಾಲೆಯ ಮೇಲ್ವಿಚಾರಕ ರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಶ್ವಿನಿ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಸೆವರಿನ್ ಡಿಸೋಜಾ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಯಶವಂತ ಎಂ ವಂದಿಸಿದರು.




