





ನೆಲ್ಯಾಡಿ: ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ 23ನೇ ವರುಷದ ಸಾಮೂಹಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಶ್ರೀ ದೇವಳದ ಗೌರವಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಸಂಪುಟ ನರಸಿಂಹ ಸ್ವಾಮಿ ಮಠ, ಸುಬ್ರಹ್ಮಣ್ಯ ಇವರ ಕೃಪಾಶೀರ್ವಾದದೊಂದಿಗೆ ವೇದಮೂರ್ತಿ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಸುಳ್ಯ ಅವರ ಪೌರೋಹಿತ್ಯದಲ್ಲಿ ಪೂಜಾ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ಜರುಗಿದವು.

ಈ ಸಂದರ್ಭದಲ್ಲಿ ಶ್ರೀ ಶನೈಶ್ಚರನ ಅನುಗ್ರಹದಿಂದ ಭಕ್ತರಲ್ಲಿ ಶಾಂತಿ, ಸಮೃದ್ಧಿ ಮತ್ತು ಶಕ್ತಿಯ ಪ್ರಭಾವ ಹೆಚ್ಚಳವಾಗಲೆಂದು ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜೆಯನ್ನು ನೆರವೇರಿಸಿಕೊಂಡು ತಮ್ಮ ಸಂಕಲ್ಪಗಳನ್ನು ಪೂರ್ಣಗೊಳಿಸಿಕೊಂಡರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ರವಿಚಂದ್ರ ಹೊಸವಕ್ಷು, ಸುಪ್ರೀತಾ ರವಿಚಂದ್ರ, ಉಪಾಧ್ಯಕ್ಷ ರಘುನಾಥ ಕೆ., ಪ್ರಧಾನ ಕಾರ್ಯದರ್ಶಿ ರಾಕೇಶ್ ಎಸ್., ಕೋಶಾಧಿಕಾರಿ ಸುಧೀರ್ ಕುಮಾರ್ ಕೆ.ಎಸ್., ಜತೆ ಕಾರ್ಯದರ್ಶಿ ರಮೇಶ್ ಬಾಣಜಾಲು, ಗೌರವಸಲಹೆಗಾರ ಡಾ.ಸದಾನಂದ ಕುಂದರ್, ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ, ಸಹಅರ್ಚಕ ಅಶ್ವತ್ ನಾರಾಯಣ ತೋಡ್ತಿಲ್ಲಾಯ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿಸಲಾಯಿತು.




