ನಿಡ್ಲೆ : 15ರಿಂದ ಕರುಂಬಿತ್ತಿಲ್ ಸಂಗೀತ ಶಿಬಿರ

ಶೇರ್ ಮಾಡಿ

 

ನಿಡ್ಲೆ: 15ರಿಂದ ಕರುಂಬಿತ್ತಿಲ್ ಸಂಗೀತ ಶಿಬಿರ

ಕೊಕ್ಕಡ: ಕರುಂಬಿತ್ತಿಲ್ ಎಂಬ ಪ್ರಶಾಂತ ವಾತಾವರಣದಲ್ಲಿ ಪ್ರತೀ ಬೇಸಿಗೆಯಲ್ಲಿ ಒಂದು ಪುಟ್ಟ ಸಂಗೀತ ಲೋಕವೇ ಸೃಷ್ಟಿಯಾಗುತ್ತದೆ. ಮನೆಯ ಸುತ್ತಮುತ್ತಲೂ ಸಂಗೀತದ ವಾತಾವರಣವೇ, ಮೂಲೆಮೂಲೆಗಳಲ್ಲೂ ಸಂಗೀತವು ಮಾರ್ದನಿಸುತ್ತದೆ. 2000 ನೇ ವರ್ಷದಿಂದ ಆರಂಭವಾಗಿ ಕಳೆದ 26 ವರ್ಷಗಳಿಂದ ಧರ್ಮಸ್ಥಳದ ನಿಡ್ಲೆ ಎಂಬ ಪುಟ್ಟ ಗ್ರಾಮದಲ್ಲಿ “ಕರುಂಬಿತ್ತಿಲ್ ಶಿಬಿರ” ಎನ್ನುವ ಹೆಸರಿನಲ್ಲಿ ಪ್ರತಿ ವರ್ಷವೂ ಸಂಗೀತ ಶಿಬಿರವು ನಡೆಯುತ್ತಿದೆ. ಈ ಬಾರಿಯ ಶಿಬಿರವು ಏ.15 ರಿಂದ ಏ.19ರ ವರೆಗೆ ನಡೆಯಲಿದೆ.

ಕರುಂಬಿತ್ತಿಲ್ ಕುಟುಂಬವೇ ಒಂದು ಸಂಪೂರ್ಣ ಸಂಗೀತಮಯವಾದ ಕುಟುಂಬ. ಪ್ರಖ್ಯಾತ ಪಿಟೀಲು ವಿದ್ವಾಂಸ ವಿದ್ವಾನ್ ವಿಠ್ಠಲ ರಾಮಮೂರ್ತಿ ಚೆನ್ನೈ ಹಾಗೂ ಅವರ ಸಹೋದರಿಯರು ಸೇರಿ ಕುಟುಂಬ ಸಮಾರಂಭದಂತೆ ಆರಂಭಗೊಂಡ ಈ ಸಂಗೀತ ಶಿಬಿರವು ಇದೀಗ ಸರ್ವ ಸಂಗೀತ ವಿದ್ಯಾರ್ಥಿಗಳು ಕಾತರದಿಂದ ಕಾಯುವ ಸಂಗೀತ ಶಿಬಿರವಾಗಿ ಮಾರ್ಪಟ್ಟಿದೆ. ಕೇವಲ ಕೆಲವೇ ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಕರುಂಬಿತ್ತಿಲ್ ಶಿಬಿರ ಇದೀಗ 200ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನೊಳಗಂಡ ಬೃಹತ್ ಶಿಬಿರವಾಗಿ ಮಾರ್ಪಟ್ಟಿದೆ.

ಈ ಶಿಬಿರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಇತರ ದೂರದೂರಿಂದಲೂ, ವಿದೇಶದಿಂದಲೂ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ವಿಶ್ವ ವಿಖ್ಯಾತ ಕಲಾವಿದರಾದ ಶ್ರೀ ಲಾಲ್ಗುಡಿ ಜಿ.ಜಯರಾಮನ್, ವಿದ್ವಾನ್ ಬಾಲಮುರಳಿಕೃಷ್ಣ, ವಿದ್ವಾನ್ ಉಮಯಾಳಪುರಂ ಶಿವರಾಮನ್, ವಿದ್ವಾನ್ ಟಿ.ವಿ.ಗೋಪಾಲಕೃಷ್ಣ, ವಿದ್ವಾನ್ ಎಂ.ಚಂದ್ರಶೇಖರ್, ವಿದ್ವಾನ್ ವಿ.ವಿ.ಸುಬ್ರಹ್ಮಣ್ಯಂ, ವಿದ್ವಾನ್ ಟಿ.ಎಂ.ಕೃಷ್ಣ, ವಿದುಷಿ ಬಾಂಬೆ ಜಯಶ್ರೀ, ವಿದ್ವಾನ್ ನೈವೇಲಿ ಸಂತಾನಗೋಪಾಲನ್, ವಿದುಷಿ ಸೌಮ್ಯ, ವಿದ್ವಾನ್ ವಿಜಯಶಿವ, ಮುಂತಾದವರು ಭೇಟಿ ನೀಡಿದ ಹೆಗ್ಗಳಿಕೆ ಈ ಶಿಬಿರಕ್ಕೆ ಇದೆ.

ಈ ವರ್ಷದ ಕರುಂಬಿತ್ತಿಲ್ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪದ್ಮಶ್ರೀ ಎ.ಕನ್ಯಾಕುಮಾರಿ, ವಿದ್ವಾನ್ ಅಭಿಷೇಕ್ ರಘುರಾಮ್, ವಿದ್ವಾನ್ ಸುರೇಶ್ ವೈದ್ಯನಾಥನ್, ವಿದ್ವಾನ್ ಅರ್ಜುನ್ ಕುಮಾರ್, ವಿದ್ವಾನ್ ಬಿ.ಎಸ್. ಪುರುಷೋತ್ತಮ್, ವಿದ್ವಾನ್ ಎಸ್.ಆರ್.ಮಾರುತಿ ಪ್ರಸಾದ್, ವಿದ್ವಾನ್ ಬಾಲು ಮಾಸ್ತಿ ಹಾಗೂ ಇನ್ನಿತರ ಕಲಾವಿದರುಗಳು ಆಗಮಿಸಲಿದ್ದಾರೆ.

ಈ ಸಲದ ಕರುಂಬಿತ್ತಿಲ್ ಶಿಬಿರವು ಅನೇಕ ವಿಸ್ಮಯಕರ ಅನುಭೂತಿಗಳನ್ನು ಸಂಗೀತಾಸಕ್ತ ಶಿಬಿರಾರ್ಥಿಗಳಿಗೆ ನೀಡಲಿದೆ. ವಿಶೇಷ ಕಚೇರಿಗಳು, ಶ್ರೇಷ್ಠ ಕಲಾವಿದರ ವಿಶೇಷ ಸಂದರ್ಶನಗಳು, ಪ್ರತಿ ಶಿಬಿರಾರ್ಥಿಗೂ ಮೃದಂಗ, ವಯೊಲಿನ್ ಜತೆ ಪ್ರದರ್ಶನ ನೀಡುವ ಅವಕಾಶ, ಸಂಗೀತ ಕ್ವಿಜ್, ಸಂಗೀತ ಪ್ರಾತ್ಯ ಕ್ಷಿಕೆ, ಯಕ್ಷಗಾನ ಹಾಗೂ ಇನ್ನಿತರ ನೂತನ ಚಟುವಟಿಕೆಗಳು ಈ ಸಲದ ಶಿಬಿರಾರ್ಥಿಗಳಿಗಾಗಿ ಕಾದಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಾ.ಎಂ.ಮೋಹನ್ ಆಳ್ವ, ಡಾ.ಜಿ.ರಾಮಕೃಷ್ಣ ಆಚಾರ್ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಏ.15ರಂದು ವಿದ್ವಾನ್ ಮಾರುತಿ ಪ್ರಸಾದ್ ಅವರ ಸಂಗೀತ ಕಛೇರಿ, 16ರಂದು ಡಾ.ಸುರೇಶ್ ವೈದ್ಯನಾಥನ್ ಹಾಗೂ ತಂಡದವರಿಂದ ಮೃತ್ತಿಕಾ ವೈಭವಮ್ ಎನ್ನುವ ವಿಶಿಷ್ಟ ಕಾರ್ಯಕ್ರಮ, 17ರಂದು ಬಾಲು ಮಾಸ್ತಿ ಅವರ ವೀಣಾ ಕಛೇರಿ ಹಾಗೂ ವಿದುಷಿ ಶ್ರೇಯಾ ಕೊಳತ್ತಾಯ ಹಾಗೂ ವಿದ್ವಾನ್ ನಿರಂಜನ್ ದಿಂದೋಡಿ ಅವರ ಸಂಗೀತ ಕಾರ್ಯಕ್ರಮ, 18ರಂದು ಬೆಳಗ್ಗೆ ವಿದ್ವಾನ್ ಬಿ.ಎಸ್.ಪುರುಷೋತ್ತಮ್ ಅವರ ಲಯ ಕಾರ್ಯಾಗಾರ ಮತ್ತು ಸಂಜೆ ಗುರು ವಿದುಷಿ ಸಂಗೀತ ಕಲಾನಿ ಎ.ಕನ್ಯಾಕುಮಾರಿ ಹಾಗೂ ವಿದ್ವಾನ್ ವಿಠಲ್ ರಂಗನ್ ಅವರ ದ್ವಂದ್ವ ವಯಲಿನ್ ವಾದನ ಕಾರ್ಯಕ್ರಮ ನಡೆಯಲಿದ್ದು, ಶಿಬಿರದ ಕೊನೆಯ ದಿನವಾದ 19ರಂದು ವಿದ್ವಾನ್ ಅಭಿಷೇಕ್ ರಘುರಾಮ್ ನೇತೃತ್ವದಲ್ಲಿ ಶಿಬಿರಾರ್ಥಿಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಹೆಚ್ಚಿನ ವಿವರಗಳಿಗಾಗಿ
https://www.facebook.com/KarunbithilShibira/
Email: [email protected]
ಜಾಲತಾಣವನ್ನು ಸಂಪರ್ಕಿಸಬಹುದು ಎಂದು ಶಿಬಿರದ ಆಯೋಜಕರಾದ ವಿದ್ವಾನ್ ವಿಠ್ಠಲ ರಾಮಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply

error: Content is protected !!