





ನೆಲ್ಯಾಡಿ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲಿಜನ್‌ನ ನೂತನ ಅಧ್ಯಕ್ಷರಾಗಿ ನಿವೃತ್ತ ದೈಹಿಕ ಶಿಕ್ಷಕ ಉಲ್ಲಾಹನ್.ಪಿ. ಹಾಗೂ ತಂಡದವರ ಪದಗ್ರಹಣ ಸಮಾರಂಭ ಭಾನುವಾರ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ವಾಸುದೇವನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೀನಿಯರ್ ಚೇಂಬರ್ ಸಂಘಟನೆ ಸಮಾಜಮುಖಿ ಕಾರ್ಯಗಳ ಮೂಲಕ ಯುವಜನರನ್ನು ಸಂಘಟಿಸಿ ನಾಯಕತ್ವ ಗುಣಗಳನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ. ಹೊಸ ಪದಾಧಿಕಾರಿಗಳು ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಿ ಸಮಾಜಕ್ಕೆ ಉತ್ತಮ ಮಾದರಿಯಾಗಬೇಕು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಲಿಜನ್ ಅಧ್ಯಕ್ಷ ಪ್ರಕಾಶ್ ಕೆ.ವೈ ವಹಿಸಿದ್ದರು. ಅವರು ಕಾರ್ಯಕ್ರಮವನ್ನು ನಿರೂಪಿಸಿ, ಗತಕಾಲದ ವರದಿಯನ್ನು ಮಂಡಿಸಿದರು. ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ನೂತನ ಅಧ್ಯಕ್ಷರಾಗಿ ಉಲ್ಲಾಹನ್.ಪಿ ಅವರಿಗೆ ಪ್ರಮಾಣ ವಚನ ಬೋಧಿಸಿ, ಅಧ್ಯಕ್ಷೀಯ ಪಿನ್ ತೊಡಿಸಿ ಅಧಿಕಾರ ಹಸ್ತಾಂತರಿಸಲಾಯಿತು. ಬಳಿಕ ಮಾತನಾಡಿದ ಉಲ್ಲಾಹನ್.ಪಿ, ಸಂಸ್ಥೆಯ ಬೆಳವಣಿಗೆಗಾಗಿ ಎಲ್ಲ ಸದಸ್ಯರ ಸಹಕಾರ ಅಗತ್ಯ. ಎಲ್ಲರನ್ನು ಜೊತೆ ಸೇರಿಸಿಕೊಂಡು ಉತ್ತಮ ಕಾರ್ಯಗಳನ್ನು ರೂಪಿಸುತ್ತೇನೆ ಎಂದು ಹೇಳಿದರು. ನಂತರ ನೂತನ ಪದಾಧಿಕಾರಿಗಳಿಗೂ ಪ್ರಮಾಣ ವಚನ ಬೋಧಿಸಲಾಯಿತು. ಕಾರ್ಯದರ್ಶಿಯಾಗಿ ಜೋನ್ ಪಿ.ಎಸ್ ಹಾಗೂ ಕೋಶಾಧಿಕಾರಿಯಾಗಿ ವಿಶ್ವನಾಥ ಶೆಟ್ಟಿ ಕೆ ಅಧಿಕಾರ ಸ್ವೀಕರಿಸಿದರು.

ನೂತನವಾಗಿ ಸೇರ್ಪಡೆಗೊಂಡ ಸದಸ್ಯರಾದ ರೋಯಿ, ತೋಮಸ್ ಜಿ., ಪ್ರವೀಣ್ ಕೆ.ಟಿ., ಶಿವಣ್ಣ ಪಿ ಹೆಗ್ಡೆ, ಜಯಶೇಖರ್, ಜೋಸ್ ಕೆ.ಜೆ., ಮೇಹಿ ಜಾರ್ಜ್, ಸುನೀಶ್ ಇ.ಪಿ., ಪಿ.ವಿ. ಜೇಕಬ್, ಜಾನ್ಸನ್ ಚೆರುವಿಲ್ಲ, ಪ್ರಜ್ವಲ್ ಕೆ.ಕೆ., ಕುರಿಯನ್ ಟಿ.ಪಿ. ಇವರಿಗೆ ರಾಷ್ಟ್ರೀಯ ಉಪಾಧ್ಯಕ್ಷೆ ಅಕ್ಷತಾ ಪ್ರಮಾಣ ವಚನ ಬೋಧಿಸಿದರು.

ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸ್ಥಾಪಕ ಅಧ್ಯಕ್ಷ ಅಬ್ರಹಾಂ ವರ್ಗೀಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಧರ್ಮಗುರು ರಂಬಾನ್ ಜಿ.ಎಂ. ಸ್ಕರಿಯಾ, ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಫಾ.ನೋಮಿಸ್ ಕುರಿಯಕೊಸ್, ಟ್ರೈನಿಂಗ್ ಮತ್ತು ಯೂತ್ ವಿಂಗ್ ನಿರ್ದೇಶಕ ಹುಸೇನ್ ಹೈಕಡಿ, ಕೋ-ಆರ್ಡಿನೇಟರ್ ಡಾ. ಸದಾನಂದ ಕುಂದರ್, ನೆಲ್ಯಾಡಿ ಜೆಸಿಐ ಅಧ್ಯಕ್ಷ ಪ್ರವೀಣಿ ಸುಧಾಕರ ಶೆಟ್ಟಿ, ಸೀನಿಯರೆಟ್ ಅಧ್ಯಕ್ಷೆ ಮೇರಿ.ಕೆ, ಯೂತ್ ವಿಂಗ್ ಅಧ್ಯಕ್ಷ ಲಿಖಿತ್.ಕೆ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸನ್ಮಾನ ಕಾರ್ಯಕ್ರಮ:
ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅನಘ ಕೆ. ಹಾಗೂ ಶ್ರೀವತ್ಸ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸಬ್ ಇನ್ಸ್ಪೆಕ್ಟರ್ ಅಭಿಷೇಕ್ ಅವರನ್ನೂ ಗೌರವಿಸಲಾಯಿತು. ಬೆಂಗಳೂರಿನ ಉದ್ಯಮಿ ಜಯೇಶ್ ನಗದು ಬಹುಮಾನ ನೀಡಿ ಗೌರವಿಸಿದರು. ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ವಾಸುದೇವನ್ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರವೀಂದ್ರ ಟಿ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ ಜಾನ್ ಪಿ.ಎಸ್ ವಂದಿಸಿದರು.




