





ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾಕ್ಕೆ ತೂಫಾನ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ಸೋಮವಾರ ಬೆಳಗಿನ ಜಾವ 2:30ರ ಸುಮಾರಿಗೆ ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಪೆಟ್ರೋಲ್ ಪಂಪ್ ಬಳಿ ನಡೆದಿದೆ.
ತೂಫಾನ್ ವಾಹನವನ್ನು ಅದರ ಚಾಲಕ ಉಪ್ಪಿನಂಗಡಿ ಕಡೆಯಿಂದ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತದ ವೇಳೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಮಂಗಲಪದವು ಸುರುಳಿಮೂಲೆ ಮನೆ ನಿವಾಸಿ ದೀಪಕ್ ಎಸ್ ಅವರ ಚಿಕ್ಕಪ್ಪ ಸೋಮಪ್ಪ ಮತ್ತು ಅತ್ತೆ ಗಿರಿಜಾ ಅವರೊಂದಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದು, ಸೋಮಪ್ಪ ಅವರ ಮಗ ತಿಲಕ್ ರಾಜ್ ಅವರು ಚಾಲಕರಾಗಿದ್ದರು. ವಿಟ್ಲದಿಂದ ಹೊರಟು ಕೋಲ್ಪೆ ಪ್ರದೇಶಕ್ಕೆ ತಲುಪಿದ ಬಳಿಕ ಪೆಟ್ರೋಲ್ ಪಂಪ್ ಬಳಿ ನೀರು ಕುಡಿಯಲು ವಾಹನವನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದರು.
ಈ ವೇಳೆ ತೂಫಾನ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಮುಂದಕ್ಕೆ ಸರಿದು ಹೆದ್ದಾರಿ ಬದಿಯ ಚರಂಡಿಗೆ ಡಿಕ್ಕಿ ಹೊಡೆದು ನಿಂತಿದ್ದು, ದೀಪಕ್ ಮತ್ತು ಚಾಲಕ ತಿಲಕ್ ರಾಜ್ ಹೊರಗೆ ಎಸೆಯಲ್ಪಟ್ಟಿದ್ದಾರೆ.
ಅಪಘಾತದಲ್ಲಿ ದೀಪಕ್ ಅವರಿಗೆ ಎಡಭುಜ ಹಾಗೂ ಬಲ ಕೈ ಮಣಿಕಟ್ಟಿನಲ್ಲಿ ಗಾಯಗಳಾಗಿದ್ದು, ತಿಲಕ್ ರಾಜ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸೋಮಪ್ಪ ಅವರಿಗೆ ಮೂಗು, ತಲೆಯ ಹಿಂಭಾಗ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದು, ಗಿರಿಜಾ ಅವರಿಗೆ ತಲೆ, ಎದೆ ಸೇರಿದಂತೆ ದೇಹದ ಹಲವೆಡೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ತಕ್ಷಣ ಅಂಬ್ಯುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸೋಮಪ್ಪ ಮತ್ತು ಗಿರಿಜಾ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಂಭೀರವಾಗಿ ಗಾಯಗೊಂಡಿದ್ದ ಗಿರಿಜಾ ಅವರು ಆಸ್ಪತ್ರೆಯಲ್ಲಿ ನಿಧನರಾದರು.
ಘಟನೆಯ ಮಾಹಿತಿ ತಿಳಿದ ಕೂಡಲೇ ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದೀಪಕ್ ಎಸ್ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




