ಗಂಟೆಗಟ್ಟಲೆ ಸಿಗ್ನಲ್ ನಾಪತ್ತೆ – ಕರೆ, ಬ್ಯಾಂಕಿಂಗ್, ಆನ್‌ಲೈನ್ ಸೇವೆಗಳು ಸಂಪೂರ್ಣ ಅಸ್ತವ್ಯಸ್ತ






ನೆಲ್ಯಾಡಿ: ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಕಳೆದೊಂದು ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ತೀವ್ರಗೊಂಡಿದ್ದು, ಜನಸಾಮಾನ್ಯರು ದಿನನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಆಗಾಗ ನೆಟ್ವರ್ಕ್ ಕೈಕೊಡುತ್ತಿರುವ ಪರಿಣಾಮ ಕರೆ ಮಾಡಲು ಸಾಧ್ಯವಾಗದಿರುವುದು, ಇಂಟರ್ನೆಟ್ ಸಂಪೂರ್ಣ ಸ್ಥಗಿತಗೊಳ್ಳುವುದು, ಆನ್‌ಲೈನ್ ಸೇವೆಗಳು ಅಸ್ತವ್ಯಸ್ತವಾಗುವುದು ಸೇರಿದಂತೆ ಅನೇಕ ಸಮಸ್ಯೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.
ಶನಿವಾರದಂದು ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಮೊಬೈಲ್ ನೆಟ್ವರ್ಕ್ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಜನರು ಪರದಾಡುವಂತಾಯಿತು. ಕರೆ ಮಾಡಲು ಸಾಧ್ಯವಾಗದೇ, ವಾಟ್ಸಾಪ್ ಸಂದೇಶಗಳು ಹೋಗದೇ, ಯುಪಿಐ ಪಾವತಿ ಸ್ಥಗಿತಗೊಂಡು ಅಂಗಡಿ-ವ್ಯಾಪಾರಸ್ಥರು ಹಾಗೂ ಗ್ರಾಹಕರು ಸಂಕಷ್ಟ ಅನುಭವಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವೇ ಜನರ ಬದುಕಿನ ಅವಿಭಾಜ್ಯ ಅಂಗವಾಗಿರುವ ಈ ಕಾಲದಲ್ಲಿ, ನೆಟ್ವರ್ಕ್ ಸಮಸ್ಯೆ ಜನಜೀವನದ ಮೇಲೆಯೇ ನೇರ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣ, ಬ್ಯಾಂಕಿಂಗ್ ವ್ಯವಹಾರ, ತುರ್ತು ವೈದ್ಯಕೀಯ ಸಂಪರ್ಕ ಹಾಗೂ ಸಣ್ಣ ವ್ಯಾಪಾರಿಗಳ ಹಣಕಾಸು ವ್ಯವಹಾರಗಳೆಲ್ಲವೂ ಮೊಬೈಲ್ ನೆಟ್ವರ್ಕ್ ಮೇಲೆಯೇ ಅವಲಂಬಿತವಾಗಿವೆ. ಆದರೆ ನಿರಂತರ ಸಮಸ್ಯೆಯಿಂದ ಜನರು ಬೇಸತ್ತು ಹೋಗಿದ್ದಾರೆ.
ಗ್ರಾಮೀಣ ಭಾಗಗಳಿಂದ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವ ಮೊಬೈಲ್ ಕಂಪನಿಗಳು ಸೇವೆ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುತ್ತಿವೆ ಎಂಬ ಆರೋಪವೂ ಕೇಳಿಬರುತ್ತಿದೆ. ಕೂಡಲೇ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಹೆಚ್ಚುವರಿ ಟವರ್ ವ್ಯವಸ್ಥೆ ಮಾಡದಿದ್ದರೆ ಸಾರ್ವಜನಿಕರು ಹೋರಾಟದ ಮಾರ್ಗ ಹಿಡಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.



