





ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರು ಶ್ರೀ ಕ್ಷೇತ್ರ ದೈವಂಗಳ ಬನದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಕೊಡಿಮರ ಆಗಮನ ಸಮಾರಂಭವು ಗುರುವಾರ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8ಕ್ಕೆ ಪಟ್ರಮೆ ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರದಲ್ಲಿ ನೂತನ ಧ್ವಜಮರಕ್ಕೆ ವಿಶೇಷ ಪೂಜೆ ನಡೆಯಿತು. ಬಳಿಕ ಬೆಳಿಗ್ಗೆ 8.15ಕ್ಕೆ ಬಾಬು ಗೌಡ ಮೊಟ್ಟಿಕಲ್ಲು ಅವರು ಧ್ವಜಮರಕ್ಕೆ ಚಾಲನೆ ನೀಡಿದರು.ವಿವಿಧ ಭಜನಾ ಮಂಡಳಿಗಳ ಸದಸ್ಯರಿಂದ ಭಜನೆ, ಚೆಂಡೆ ವಾದನ ಹಾಗೂ ಧಾರ್ಮಿಕ ಘೋಷಣೆಗಳ ನಡುವೆ ನೂತನ ಧ್ವಜಮರವನ್ನು ಶ್ರೀ ಕ್ಷೇತ್ರ ದೈವಂಗಳ ಬನಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು.
ಬಳಿಕ ಬೆಳಿಗ್ಗೆ 9.30ಕ್ಕೆ ನೂತನ ದೈವಸ್ಥಾನ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ನಂತರ ಭಕ್ತಾದಿಗಳಿಂದ “ಮುಷ್ಟಿ ಕಾಣಿಕೆ” ಸಮರ್ಪಣೆ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಅನಾರು ಶ್ರೀ ದುರ್ಗಾಪರಾಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ನಿತೇಶ್ ಬಳ್ಳಾಲ್ ಉಳಿಯಬೀಡು ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಸೌತಡ್ಕದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲುರಾಯ ಮಾತನಾಡಿ ದಕ್ಷಿಣ ಕನ್ನಡದಲ್ಲಿ ದೈವ ದೇವರಿಗೆ ವಿಶೇಷ ಸ್ಥಾನವಿದೆ. ನಾವು ಅತ್ಯಂತ ಶ್ರದ್ಧೆ-ಭಕ್ತಿಯಿಂದ ದೈವ ದೇವರನ್ನು ಆರಾಧಿಸುತ್ತೇವೆ. ಮುಂದಿನ ಪೀಳಿಗೆಗೂ ದೈವ ಆರಾಧನೆಯ ಕಟ್ಟುಪಾಡುಗಳನ್ನು ತಿಳಿಸಿಕೊಡಬೇಕು. ಇಲ್ಲದಿದ್ದರೆ ಸಂಪ್ರದಾಯಗಳಲ್ಲಿ ವ್ಯತ್ಯಾಸ ಉಂಟಾಗಿ ಕೆಲವು ಉತ್ತಮ ಆಚರಣೆಗಳು ನಶಿಸಿ ಹೋಗುವ ಸಾಧ್ಯತೆ ಇದೆ ಎಂದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ಮಾತನಾಡಿ, ಕಳೆದ 11 ವರ್ಷಗಳಿಂದ ಈ ಸಾನಿಧ್ಯವನ್ನು ಅಭಿವೃದ್ಧಿಪಡಿಸಿ ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. 12ನೇ ವರ್ಷದ ಜೀರ್ಣೋದ್ಧಾರದ ಭಾಗವಾಗಿ ಇನ್ನೂ ಅನೇಕ ಕೆಲಸಗಳು ನಡೆಯಬೇಕಿದೆ. ಎಲ್ಲರ ಸಹಕಾರದಿಂದ ಉತ್ತಮ ದೈವಸ್ಥಾನ ನಿರ್ಮಾಣ ಮಾಡುತ್ತೇವೆ, ಕೊಡಿಮರದ ಆಗಮನ ಅತ್ಯಂತ ವಿಜೃಂಭಣೆಯಿಂದ ನೆರವೇರಿದೆ. ಅತಿ ಸೂಕ್ಷ್ಮ ವೆಚ್ಚದಲ್ಲಿ ಎಲ್ಲರೂ ಸೇರಿ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ ದೈವ ದೇವರ ಸಾನಿಧ್ಯವನ್ನು ಆಧುನಿಕತೆಯ ಹೆಸರಿನಲ್ಲಿ ಟೈಲ್ಸ್ ಹಾಗೂ ಗ್ರಾನೈಟ್ ಅಳವಡಿಸಿ ನಿರ್ಮಿಸಬಾರದು. ಇಂತಹ ಸ್ಥಳಗಳಲ್ಲಿ ದೈವಶಕ್ತಿ ನೆಲೆಸುವುದಿಲ್ಲ ಎನ್ನುವುದು ನಮ್ಮ ಸಂಪ್ರದಾಯದ ನಂಬಿಕೆ ನಾಗದೇವರಿಗೆ ಮಣ್ಣಿನ ನೆಲ ಅಗತ್ಯ. ದೈವ ನರ್ತನ ನಡೆಯುವಾಗ ಮಣ್ಣಿನ ಸ್ಪರ್ಶ ಇರಬೇಕು. ದೈವದ ಕಾರ್ಯಕ್ರಮಗಳಲ್ಲಿ ಹಣದ ಆಡಂಬರಕ್ಕಿಂತ ಭಕ್ತಿಯ ಆಡಂಬರವೇ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಎಕ್ಸೆಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಚೇರ್ಮನ್ ಸುಮಂತ್ ಕುಮಾರ್ ಜೈನ್, ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶಬರಾಯ, ಪಟ್ರಮೆ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಧರ ಶಬರಾಯ, ಯುವ ಉದ್ಯಮಿ ಗಣೇಶ್ ಗೌಡ ಕಲಾಯಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಜಾರಪ್ಪ ಗೌಡ ಸಂಕೇಶ, ಪ್ರಗತಿಪರ ಕೃಷಿಕ ಜಾರಪ್ಪ ಗೌಡ ಕುಂಡಡ್ಕ, ಅನಾರ್ ಟೈಯರ್ಸ್ ಅಂಡ್ ಸರ್ವಿಸ್ ಮಾಲಕ ರಾಜೀವ ಅನಾರ್, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಮನೋಜ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಧರ್ನಪ್ಪ ಗೌಡ ಮೊಟ್ಟಿಕಲ್ಲು ಪ್ರಸ್ತಾವಿಕವಾಗಿ ಮಾತನಾಡಿ ದೈವಸ್ಥಾನದ ಇತಿಹಾಸ ಹಾಗೂ ಮುಂದಿನ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ದೈವಸ್ಥಾನಕ್ಕೆ ಕೊಡಿಮರ ನೀಡಿದ ದಾನಿ ಪ್ರಭಾವತಿ ಕೊಡಿಕೇರಿ ಹಾಗೂ ಮರ ನೀಡಿದ ರವೀಂದ್ರನಾಥ ಶೆಟ್ಟಿ ಗುತ್ಯಾಡಿ ಅವರನ್ನು ಸನ್ಮಾನಿಸಲಾಯಿತು.
ವಿಕ್ರಂ ಮರುವಂತಿಲ ಪ್ರಾರ್ಥಿಸಿದರು. ಹೇಮಂತ್ ಶೆಟ್ಟಿ ಸ್ವಾಗತಿಸಿದರು. ಶ್ರೀಧರ್ ಕೆ.ಎಸ್. ಮೊಟ್ಟಿಕಲ್ಲು ಕಾರ್ಯಕ್ರಮ ನಿರೂಪಿಸಿದರು. ನಿತೇಶ್ ಶೆಟ್ಟಿ ವಂದಿಸಿದರು.



