ಇಂತಹ ಘಟನೆಗಳು ಮರುಕಳಿಸಿದರೆ ಉಗ್ರ ಹೋರಾಟ- ನವೀನ್ ನೆರಿಯ






ಕಡಬ: ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ ಎನ್ನಲಾದ ಮತಾಂತರ ಯತ್ನಗಳನ್ನು ಖಂಡಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ತೀವ್ರ ಹೋರಾಟ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ.
ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಐತ್ತೂರು ಗ್ರಾಮದ ಭಾಗದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ, ಬೆಂಗಳೂರು ಮೂಲದ ಕೆಲವರನ್ನು ಕರೆತಂದು ಸ್ಥಳೀಯ ಮನೆಯೊಂದರಲ್ಲಿ ಗುಪ್ತವಾಗಿ ಪ್ರಾರ್ಥನೆ ಹಾಗೂ ಮತಾಂತರ ಯತ್ನ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ನಮ್ಮ ಕಾರ್ಯಕರ್ತರು ಪರಿಶೀಲನೆ ನಡೆಸಿದ್ದರು. ಆ ವೇಳೆ ಮತಾಂತರ ಯತ್ನ ನಡೆದಿರುವುದು ಕಂಡುಬಂದಿದೆ. ಆದರೆ ನಂತರ ಪ್ರಕರಣವನ್ನು ತಿರುಚುವ ಕೆಲಸ ನಡೆದಿದೆ ಎಂದು ಆರೋಪಿಸಿದರು.
ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಆದರೆ ನಂತರ ನಾಟಕೀಯ ಬೆಳವಣಿಗೆ ನಡೆದು, ಅವರು ಈಗಾಗಲೇ ಮತಾಂತರಗೊಂಡಿದ್ದಾರೆ ಎಂಬ ಸ್ಪಷ್ಟನೆ ಎಸ್.ಪಿ. ಅವರಿಂದ ಬಂದಿದೆ. ಆದರೆ ಮತಾಂತರ ಮಾಡಿರುವುದೇ ತಪ್ಪಲ್ಲವೇ? ಎಂದು ಪ್ರಶ್ನಿಸಿದರು.
ಕಡಬ ತಾಲೂಕಿನ ಗ್ರಾಮೀಣ ಭಾಗಗಳನ್ನು ಗುರಿಯಾಗಿಸಿಕೊಂಡು ಕೆಲ ಸಂಘಟನೆಗಳು ಹಾಗೂ ವ್ಯಕ್ತಿಗಳು ಆಮಿಷ ಒಡ್ಡುವ ಮೂಲಕ ಮತಾಂತರ ಚಟುವಟಿಕೆಗಳಲ್ಲಿ ತೊಡಗಿರುವ ಅನುಮಾನಗಳಿದ್ದು, ಈ ಕುರಿತು ಪೊಲೀಸರು ಹಾಗೂ ಜಿಲ್ಲಾಡಳಿತ ಗಂಭೀರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಹಿಂದೂ ಸಮಾಜದ ಮಹಿಳೆಯರು ಹಾಗೂ ಯುವಕರನ್ನು ಗುರಿಯಾಗಿಸಿಕೊಂಡು ನಡೆಯುವ ಇಂತಹ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕಾನೂನುಬಾಹಿರ ಮತಾಂತರ ಯತ್ನಗಳು ನಡೆದರೆ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳು ಸ್ವಯಂಪ್ರೇರಿತವಾಗಿ ಸ್ಥಳಕ್ಕೆ ತೆರಳಿ ತಡೆಯುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಕೆ ನೀಡಿದರು.
ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ಅನುಮಾನಾಸ್ಪದ ಸಭೆಗಳು, ಪ್ರಾರ್ಥನೆಗಳು ಹಾಗೂ ಗುಪ್ತ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆ ನಿರಂತರ ನಿಗಾ ವಹಿಸಬೇಕು. ಮತಾಂತರ ಯತ್ನಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೋದ್ ರೈ ನಂದಗುರಿ, ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೀಳಾ ಲೋಕೇಶ್ ಹಾಗೂ ಮಾತೃಶಕ್ತಿ ಸಂಯೋಜಕಿ ಪ್ರೇಮಲತಾ ಕೇಪುಂಜ ಉಪಸ್ಥಿತರಿದ್ದರು.



