ದಾದಿಯರ ಮಾನವೀಯ ಸೇವೆ ಅಮೂಲ್ಯ : ಉಲಹನ್ನನ್. ಪಿ.ಎಂ







ನೆಲ್ಯಾಡಿ: ವಿಶ್ವ ದಾದಿಯರ ದಿನಾಚರಣೆಯನ್ನು ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲೀಜನ್ ವತಿಯಿಂದ ಅರಸಿನಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲೀಜನ್ ಅಧ್ಯಕ್ಷ ಉಲಹನ್ನನ್.ಪಿ.ಎಂ ವಹಿಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರಾದ ಲಲಿತಾ, ಸುಚಿತ್ರಾ ಹಾಗೂ ಮಿನಿ ಅವರನ್ನು ಗೌರವಿಸಲಾಯಿತು. ಬಳಿಕ ಮಾತನಾಡಿದ ಉಲಹನ್ನನ್.ಪಿ.ಎಂ ವಿಶ್ವ ದಾದಿಯರ ದಿನವನ್ನು ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವಾದ ಮೇ 12ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಮನುಕುಲಕ್ಕೆ ಅವರು ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ರೋಗಿಗಳ ಆರೈಕೆ, ಅವರಲ್ಲಿ ಮಾನಸಿಕ ಧೈರ್ಯ ತುಂಬುವುದು ಹಾಗೂ ಸೇವಾಭಾವದಿಂದ ಕರ್ತವ್ಯ ನಿರ್ವಹಿಸುವಲ್ಲಿ ದಾದಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯಾವುದೇ ರೀತಿಯ ಅಸಹ್ಯತೆ ತೋರದೆ ರೋಗಿಗಳನ್ನು ಅಮ್ಮನಂತೆ ಆರೈಕೆ ಮಾಡುವ ದಾದಿಯರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೀನಿರೇಟ್ ಅಧ್ಯಕ್ಷೆ ಮೇರಿ.ಕೆ ದಾದಿಯರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ವಿಶ್ವ ದಾದಿಯರ ದಿನದ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಸಿನಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಕಾಶ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


