ವಿಟ್ಲದಲ್ಲಿ ಅಕ್ರಮ ಗೋಸಾಗಾಟ ಪತ್ತೆ; ಪೊಲೀಸರ ಮೇಲೆಯೇ ಕಾರು ಹರಿಸಿ ಪರಾರಿಯಾದ ಆರೋಪ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಶೇರ್ ಮಾಡಿ

 

ವಿಟ್ಲದಲ್ಲಿ ಅಕ್ರಮ ಗೋಸಾಗಾಟ ಪತ್ತೆ; ಪೊಲೀಸರ ಮೇಲೆಯೇ ಕಾರು ಹರಿಸಿ ಪರಾರಿಯಾದ ಆರೋಪ; ಇಬ್ಬರ ವಿರುದ್ಧ ಪ್ರಕರಣ ದಾಖಲು

ವಿಟ್ಲ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಎರಡು ಜಾನುವಾರುಗಳನ್ನು ರಕ್ಷಿಸಿದ ಘಟನೆ ಮೇ 21ರಂದು ಬೆಳಿಗ್ಗೆ ಬಂಟ್ವಾಳ ತಾಲೂಕಿನ ಕೊಳ್ನಾಡು ಪಂಜರಕೋಡಿಯಲ್ಲಿ ನಡೆದಿದೆ.

ಪಿಕ್‌ಅಪ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದ ವೇಳೆ, ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ ಸ್ವಿಫ್ಟ್ ಕಾರಿನಲ್ಲಿದ್ದ ಆರೋಪಿ ಬಶೀರ್ ಎಂಬಾತನು ಸ್ಥಳದಲ್ಲಿದ್ದ ಪೊಲೀಸರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಬಳಿಕ ಪಿಕ್‌ಅಪ್ ವಾಹನವನ್ನು ಪರಿಶೀಲಿಸಿದಾಗ ಎರಡು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಿಸಲಾಗುತ್ತಿದ್ದುದು ಪತ್ತೆಯಾಗಿದೆ. ಈ ಸಂಬಂಧ ವಾಹನ ಚಾಲಕ ಬಂಟ್ವಾಳ ಬಾಳೆಪುಣಿ ನಿವಾಸಿ ಮೊಹಮ್ಮದ್ ಹನೀಪ್(44) ಅವರನ್ನು ವಿಚಾರಿಸಿದಾಗ, ಯಾವುದೇ ಪರವಾನಿಗೆ ಪಡೆಯದೇ ಜಾನುವಾರುಗಳನ್ನು ವಧೆಗಾಗಿ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ ಪಿಕ್‌ಅಪ್ ವಾಹನ ಹಾಗೂ ಎರಡು ಜಾನುವಾರುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಮೊಹಮ್ಮದ್ ಹನೀಪ್ ಹಾಗೂ ಬಶೀರ್ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂ 5, 7, 12 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಕಲಂ 11ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

 

Leave a Reply

error: Content is protected !!