






ನೆಲ್ಯಾಡಿ: ನೆಲ್ಯಾಡಿ ಗ್ರಾಮದ ರಾಮನಗರದ ಅಮೆತ್ತಿಮಾರು ಗುತ್ತುವಿನಲ್ಲಿ ದಾನಿಗಳ ಸಹಕಾರದೊಂದಿಗೆ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಒಂದನೇ ತರಗತಿಯಿಂದ ಪದವಿವರೆಗಿನ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ರಾಮನಗರ, ಪಡುಬೆಟ್ಟು ಹಾಗೂ ಬಲ್ಯ ಗ್ರಾಮದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವನ್ನು ಮಕ್ಕಳಿಗೆ ನೋಟ್ ಬುಕ್ ವಿತರಿಸುವ ಮೂಲಕ ಬಲ್ಯ ಗ್ರಾಮದ ಪ್ರಗತಿಪರ ಕೃಷಿಕ ರಮೇಶ್ ಗೌಡ ನಾಲ್ಗೊತ್ತು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಒಂದನೇ ತರಗತಿಯಿಂದ ಪದವಿವರೆಗಿನ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ರೂಪದಲ್ಲಿ ಉಚಿತ ನೋಟ್ ಬುಕ್ಗಳನ್ನು ವಿತರಿಸಲಾಗುತ್ತಿದೆ. ಈ ವರ್ಷ ಈಗಾಗಲೇ 150ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಮಕ್ಕಳಿಗೆ ಸಂತೋಷದಿಂದ ಪುಸ್ತಕ ವಿತರಣೆ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಈ ಪುಸ್ತಕಗಳನ್ನು ಪಡೆದುಕೊಂಡ ಎಲ್ಲಾ ಮಕ್ಕಳ ಭವಿಷ್ಯ ಉಜ್ವಲವಾಗಲಿ ಹಾಗೂ ದೇವರು ಅವರಿಗೆ ಸಕಲ ಸನ್ಮಂಗಳವನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಸಂಘಟಕ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಗಂಗಾಧರ ಶೆಟ್ಟಿ ಅಮೆತ್ತಿಮಾರು ಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಮಣ್ಣಿನ ಧರ್ಮ ದೈವಗಳು ಹಾಗೂ ನಾಗದೇವರ ಕೃಪಾಶೀರ್ವಾದದಿಂದ 25 ಮಕ್ಕಳಿಂದ ಪ್ರಾರಂಭವಾದ ಈ ಸೇವಾ ಕಾರ್ಯ ಇಂದು 150ಕ್ಕೂ ಅಧಿಕ ವಿದ್ಯಾರ್ಥಿಗಳ ಮಟ್ಟಿಗೆ ಬೆಳೆದಿದೆ. ಪುಸ್ತಕಗಳನ್ನು ಸ್ವೀಕರಿಸುವಾಗ ಮಕ್ಕಳ ಮುಖದಲ್ಲಿ ಕಾಣುವ ಸಂತೋಷವೇ ಪ್ರತಿವರ್ಷ ಈ ಕಾರ್ಯಕ್ರಮ ನಡೆಸಲು ನಮಗೆ ಪ್ರೇರಣೆಯಾಗುತ್ತಿದೆ. ಅನೇಕ ದಾನಿಗಳು ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ಕೆ ಕೈಜೋಡಿಸಿರುವುದು ಸಂತಸದ ವಿಚಾರವಾಗಿದೆ. ಈ ಸೇವಾ ಕಾರ್ಯ ನಿರಂತರವಾಗಿ ನಡೆಯಲು ನಾವು ನಂಬುವ ಈ ಮಣ್ಣಿನ ಕಾರಣಿಕ ಶಕ್ತಿಗಳು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಪಡುಬೆಟ್ಟು, ಸರಕಾರಿ ಪ್ರೌಢಶಾಲೆ ಪಡುಬೆಟ್ಟು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲ್ಯ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಉಚಿತ ನೋಟ್ ಬುಕ್ಗಳನ್ನು ಪಡೆದುಕೊಂಡರು. ಈ ಕಾರ್ಯಕ್ರಮಕ್ಕೆ ದಾನಿಗಳಾಗಿ ಬಾಂಬೆ ಅಕ್ಷರ ಕ್ಯಾಟರಿಂಗ್ ಸರ್ವಿಸ್ – ಬಾಂಬೆ ಕಲ್ಕತ್ತಾ, ಮದ್ರಾಸ್, ಧಾರವಾಡ, ಮಂಗಳೂರು ಇಂಡಸ್ಟ್ರಿಯಲ್ ಕ್ಯಾಂಟೀನ್ ನ ಅಮರ್ ಶೆಟ್ಟಿ , ಬೆಂಗಳೂರು ಉದ್ಯಮಿಗಳು ಬಾಲಕೃಷ್ಣನ್ ರಾಜಶೇಖರ್, ನೆಲ್ಯಾಡಿ ಎಸ್ಸಿ ಬ್ಯಾಂಕ್ ಮಹೇಶ್ ಗೌಡ ಮುದಲೆಗುತ್ತು , ರಮೇಶ್ ಗೌಡ ನಾಲ್ಗೊತ್ತು, ಶ್ರೀಕರ ರೈ ಮುಂಡ್ರಾಡಿಗುತ್ತು ಕಡಬ, ನೆಲ್ಯಾಡಿ ಬಾಲಾಜಿ ಮೆಡಿಕಲ್ಸ್ ನ ಉದಯಕುಮಾರ್ ಭಟ್ ಹಾಗೂ ಗಂಗಾಧರ ಶೆಟ್ಟಿ ಅಮೆತ್ತಿಮಾರು ಗುತ್ತು ಸಹಕರಿಸಿದರು. ಸುಮಾರು ₹50,000 ಮೌಲ್ಯದ ನೋಟ್ ಬುಕ್ಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.


