






ಉಜಿರೆ: ರಾಜ್ಯದ ಮೇಲ್ಪಂಕ್ತಿಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದು, ಸಿದ್ಧವನದಂತಹ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಸಿದ್ಧಗೊಳಿಸುವ ಮಹತ್ವದ ಕಾರ್ಯ ಮಾಡುತ್ತಿವೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಪ್ರಾಧ್ಯಾಪಕರಾದ ಅಬ್ದುಲ್ ರಜಾಕ್ ಅನಂತಾಡಿ ಹೇಳಿದರು.

ಅವರು ಮೇ 29ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರವೇಶ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಅಂಕಗಳು ಅನಾಯಾಸವಾಗಿ ದೊರೆಯುವುದಿಲ್ಲ. ಎರಡು ವರ್ಷಗಳ ಕಾಲ ಕಠಿಣ ಪರಿಶ್ರಮ ಪಟ್ಟಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ನಿಗದಿತ ಗುರಿಯನ್ನು ಸಾಧಿಸಲು ಪ್ರಯತ್ನಿಸಬೇಕು. ಅಶಿಸ್ತು, ಕೆಟ್ಟ ಚಟಗಳು, ವಯೋಸಹಜ ಕಾಮನೆಗಳು, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರೆ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಕ್ಷಣದ ವ್ಯವಸ್ಥೆಯಲ್ಲಿ ಹಾಜರಾತಿಗೆ ಅತೀ ಹೆಚ್ಚಿನ ಮಹತ್ವವಿದೆ. ತರಗತಿಗಳಲ್ಲಿ ನಡೆಯುವ ಪಾಠ ಪ್ರವಚನಗಳನ್ನು ಗಮನವಿಟ್ಟು ಆಲಿಸಿದರೆ ವಿಷಯ ಸುಲಭವಾಗಿ ಅರ್ಥವಾಗುತ್ತದೆ. ಶಿಕ್ಷಣದ ಬಗ್ಗೆ ಬದ್ಧತೆ ಇದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಭಾಷಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದರೆ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಹಕಾರಿ. ಬರವಣಿಗೆ ಶುದ್ಧ ಹಾಗೂ ಸುಂದರವಾಗಿರಬೇಕು. ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಣ್ಣ ಪುಟ್ಟ ತಪ್ಪುಗಳು ಕಲಿಕೆಗೆ ಅಡ್ಡಿಯಾಗಬಹುದು. ತಾವು ಕಲಿಯುವ ವಿದ್ಯಾಸಂಸ್ಥೆಯ ಬಗ್ಗೆ ಗೌರವ ಹಾಗೂ ಅಭಿಮಾನ ಹೊಂದಿರಬೇಕು. ಹೆತ್ತವರ ಭರವಸೆಯನ್ನು ಹುಸಿ ಮಾಡಬಾರದು. ತಮ್ಮ ಮೇಲೆ ತಮಗೆ ಅಭಿಮಾನ ಇದ್ದರೆ ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್.ಎನ್. ಕಾಕತ್ಕರ್, ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳದ್ದಾಗಿದೆ. ನಮ್ಮ ಪದವಿ ಪೂರ್ವ ಕಾಲೇಜು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಸಮಾನವಾಗಿ ಪ್ರೋತ್ಸಾಹಿಸುವ ಸಂಸ್ಥೆಯಾಗಿದೆ. ಹೆತ್ತವರು ಯಾವುದೇ ಆತಂಕಪಡುವ ಅಗತ್ಯವಿಲ್ಲ, ಕಾಲೇಜಿನ ಪ್ರಾಧ್ಯಾಪಕರಿಂದ ಎಲ್ಲ ರೀತಿಯ ಸಹಕಾರ ದೊರೆಯಲಿದೆ ಎಂದರು. ವಿದ್ಯೆ ಶ್ರೇಷ್ಠ ಸಂಪತ್ತು. ವಿದ್ಯೆಯ ಜೊತೆಗೆ ಶಿಸ್ತಿಗೂ ಕಾಲೇಜು ಹೆಚ್ಚಿನ ಮಹತ್ವ ನೀಡುತ್ತದೆ. ಕಾಲೇಜಿನಲ್ಲಿ ನೀಡುವ ನೈತಿಕ ಶಿಕ್ಷಣ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿವಿಧ ವಿಭಾಗಗಳಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ನಿಜ ಕುಲಾಲ್, 9ನೇ ಸ್ಥಾನ ಪಡೆದ ಶ್ರೀಪೂರ್ಣ ಗಬ್ಲಡ್ಕ, ವಾಣಿಜ್ಯ ವಿಭಾಗದಲ್ಲಿ 6ನೇ ಸ್ಥಾನ ಪಡೆದ ಹಂಸಿನಿ ಭಿಡೆ, 8ನೇ ಸ್ಥಾನ ಪಡೆದ ಅರ್ಪಿತ ಅಡಿಗ, 9ನೇ ಸ್ಥಾನ ಪಡೆದ ಅಂಶುಲ ಶ್ರೇಷ್ಠ, 10ನೇ ಸ್ಥಾನ ಪಡೆದ ರಾಮಚರಣ್ ಎಸ್. ಹಾಗೂ ವಿಜ್ಞಾನ ವಿಭಾಗದಲ್ಲಿ 9ನೇ ಸ್ಥಾನ ಪಡೆದ ಅಂಕಿತಾ ಅವರನ್ನು ಸನ್ಮಾನಿಸಲಾಯಿತು.
ಸಾಧಕರನ್ನು ಗೌರವಿಸಿ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಉನ್ನತ ಸಾಧನೆಗೆ ಶಿಕ್ಷಕರ ಹಾಗೂ ಹೆತ್ತವರ ಮಾರ್ಗದರ್ಶನ ಅತ್ಯಗತ್ಯ. ವಿದ್ಯಾರ್ಥಿಗಳ ಸಾಧನೆ ಹೊಸದಾಗಿ ಸೇರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡುವ ಕಾರ್ಯವನ್ನು ನಮ್ಮ ಕಾಲೇಜಿನ ಅಧ್ಯಾಪಕರು ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ., ಯಶಸ್ಸಿನ ಸೂತ್ರಗಳನ್ನು ಸರಿಯಾಗಿ ಪಾಲಿಸಿದಾಗ ಮಾತ್ರ ಕನಸು ನನಸಾಗುತ್ತದೆ. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುವಾಗದೆ ಸಹಪಠ್ಯ ಚಟುವಟಿಕೆಗಳಲ್ಲೂ ಭಾಗವಹಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.
ಕಾಲೇಜಿನ ಉಪ ಪ್ರಾಂಶುಪಾಲ ಡಾ.ರಾಜೇಶ್ ಬಿ. ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ತಿರುಮಲ ಪ್ರಸಾದ್ ಸಿ.ಎಚ್. ವಂದಿಸಿದರು. ಕನ್ನಡ ಭಾಷಾ ಪ್ರಾಧ್ಯಾಪಕ ಡಾ. ಮಹಾವೀರ ಜೈನ್ ಕಾರ್ಯಕ್ರಮ ನಿರೂಪಿಸಿದರು.


