






ನೆಲ್ಯಾಡಿ: ಭಾರತೀಯ ಭೂಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಪದೋನ್ನತಿ ಹೊಂದಿರುವ ಉದನೆ ಪ್ಯಾರಿಷ್‌ನ ಪುತ್ತೆನ್‌ಪರಂಬಿಲ್ ಜೋಸೆಫ್ ಹಾಗೂ ಮೇರಿ ದಂಪತಿಯ ಪುತ್ರ ಲೆಫ್ಟಿನೆಂಟ್ ಕರ್ನಲ್ ವಿನೋಜ್ ಪಿ.ಜೆ. ಅವರನ್ನು ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
1995ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡ ವಿನೋಜ್ ಅವರು ತಮ್ಮ ಸೈನಿಕ ಜೀವನದಲ್ಲಿ ಶಿಸ್ತು, ನಿಷ್ಠೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ತೋರಿದ್ದಾರೆ. 2011ರಲ್ಲಿ ಅಧಿಕಾರಿಯಾಗಿ ನೇಮಕಗೊಂಡ ಅವರು, ಬಳಿಕ ಕ್ಯಾಪ್ಟನ್, ಮೇಜರ್ ಹುದ್ದೆಗಳನ್ನು ಅಲಂಕರಿಸಿ 2024ರಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ. ಪ್ರಸ್ತುತ ಅವರು ಜಬಲ್ಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಮಾರಂಭದಲ್ಲಿ ಲೆ.ಕರ್ನಲ್ ವಿನೋಜ್ ಪಿ.ಜೆ. ಅವರ ಸಾಧನೆಯನ್ನು ಶ್ಲಾಘಿಸಿ, ಪುಣ್ಯಕ್ಷೇತ್ರದ ಪರವಾಗಿ ಸನ್ಮಾನ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿ ಮಾತನಾಡಿದ ಪುಣ್ಯಕ್ಷೇತ್ರದ ನಿರ್ದೇಶಕ ವಂ.ಫಾ.ಶಾಜಿ ಮಾತ್ಯು, ದೇಶದ ಭದ್ರತೆ ಮತ್ತು ಸಾರ್ವಭೌಮತ್ವ ಕಾಪಾಡುವ ಸೈನಿಕರ ಸೇವೆ ಅತ್ಯಂತ ಶ್ರೇಷ್ಠವಾದದ್ದು ಎಂದು ಬಣ್ಣಿಸಿದರು. ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸಶಸ್ತ್ರ ಪಡೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತೃವೇದಿಕೆ ಅಧ್ಯಕ್ಷೆ ಸುಜಾ ಜೇಮ್ಸ್, ಸಿಸ್ಟರ್ ಲಿಸ್ ಮಾತ್ಯು, ಯುವಜನ ಸಂಘದ ದಿಶಾ ಹಾಗೂ ಜಿತು, ಕ್ರೆಡಿಟ್ ಯೂನಿಯನ್‌ನ ಶಿಬು, ವಿನ್ಸೆಂಟ್ ಡಿ ಪೌಲ್ ಸಂಘದ ಸನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬೆರಿಲ್ ಕಾರ್ಯಕ್ರಮ ನಿರೂಪಿಸಿದರು.


