ಗಡಾಯಿಕಲ್ಲಿನಲ್ಲಿ ಚಾರಣಿಕನಿಗೆ ಕಾಲು ಟ್ವಿಸ್ಟ್

ಶೇರ್ ಮಾಡಿ

ಮಳೆ ನಡುವೆಯೇ 3 ಗಂಟೆಗಳ ಕಾರ್ಯಾಚರಣೆ; 1500 ಮೆಟ್ಟಿಲು ಹೊತ್ತು ಸುರಕ್ಷಿತವಾಗಿ ರಕ್ಷಿಸಿದ ಅಗ್ನಿಶಾಮಕ–ಶೌರ್ಯ ತಂಡ

 

ಗಡಾಯಿಕಲ್ಲಿನಲ್ಲಿ ಚಾರಣಿಕನಿಗೆ ಕಾಲು ಟ್ವಿಸ್ಟ್

ಬೆಳ್ತಂಗಡಿ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಗಡಾಯಿಕಲ್ಲಿಗೆ ಚಾರಣಕ್ಕೆ ಬಂದಿದ್ದ ಯುವಕನೊಬ್ಬ ಕಾಲು ಟ್ವಿಸ್ಟ್ ಆಗಿ ಬಂಡೆಯ ಮಧ್ಯೆ ಸಿಲುಕಿಕೊಂಡ ಘಟನೆ ಗುರುವಾರ ನಡೆದಿದೆ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಯುವಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ತಣ್ಣೀರುಪಂಥ ಗ್ರಾಮದ ಜನತಾ ಕಾಲನಿ ಪರಿಸರದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಟಿಕೆಟ್ ಪಡೆದು ಗಡಾಯಿಕಲ್ಲು ವೀಕ್ಷಣೆಗೆ ಬಂದಿದ್ದರು. ಈ ವೇಳೆ ಕಡಿದಾದ ಬಂಡೆಯ ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ತೆರಳುತ್ತಿದ್ದ ಮಹಮ್ಮದ್ ಶರೀಫ್ (30) ಅವರ ಕಾಲು ಏಕಾಏಕಿ ಟ್ವಿಸ್ಟ್ ಆಗಿದ್ದು, ತೀವ್ರ ನೋವಿನಿಂದ ಕೆಳಗಿಳಿಯಲು ಸಾಧ್ಯವಾಗದೆ ಮಧ್ಯದಲ್ಲೇ ಸಿಲುಕಿಕೊಂಡಿದ್ದರು.

ಜೊತೆಯಲ್ಲಿದ್ದವರು ತಕ್ಷಣ ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಮಳೆಯ ಕಾರಣ ಬಂಡೆಗಳು ಅತ್ಯಂತ ಜಾರುವಂತಾಗಿದ್ದರಿಂದ ಹಾಗೂ ಕಡಿದಾದ ಕಲ್ಲಿನ ಮೆಟ್ಟಿಲುಗಳಲ್ಲಿ ಸ್ಟ್ರೆಚರ್ ಮೂಲಕ ಗಾಯಾಳುವನ್ನು ಕೆಳಗೆ ತರುವುದು ದೊಡ್ಡ ಸವಾಲಾಗಿತ್ತು. ಆದರೂ ತಂಡದ ಸದಸ್ಯರು ಸುಮಾರು ಮೂರು ಗಂಟೆಗಳ ಕಾಲ ಹರಸಾಹಸಪಟ್ಟು, ಸುಮಾರು 1.5 ಕಿಲೋಮೀಟರ್ ದೂರ ಹಾಗೂ 1500ಕ್ಕೂ ಅಧಿಕ ಮೆಟ್ಟಿಲುಗಳಿರುವ ಗಡಾಯಿಕಲ್ಲಿನಿಂದ ಯುವಕನನ್ನು ಹೊತ್ತು ಸುರಕ್ಷಿತವಾಗಿ ಕೆಳಕ್ಕೆ ತಂದರು.

ಬಳಿಕ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

 

Leave a Reply

error: Content is protected !!