ಅತ್ಯಾಚಾರ ಆರೋಪ: ವಿವಾಹಿತೆಯ ದೂರಿನ ಮೇರೆಗೆ ಅರಸಿನಮಕ್ಕಿ ಗ್ರಾಮೀಣ ಅಂಚೆ ವಿತರಕನ ಬಂಧನ

ಶೇರ್ ಮಾಡಿ

 

ಕೊಕ್ಕಡ: ವಿವಾಹಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಗ್ರಾಮೀಣ ಅಂಚೆ ವಿತರಕರೊಬ್ಬರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಬೆಳಕಿಗೆ ಬಂದಿದೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ವಿವಾಹಿತ ಮಹಿಳೆಯೊಬ್ಬರು, 2023ರ ಡಿಸೆಂಬರ್ ತಿಂಗಳಲ್ಲಿ ತಮ್ಮ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿ ಜೂನ್ 7ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ತನಿಖೆಯ ವೇಳೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುತ್ತೋಡಿ ನಿವಾಸಿಯಾಗಿರುವ ಹಾಗೂ ಪ್ರಸ್ತುತ ಅರಸಿನಮಕ್ಕಿ ಗ್ರಾಮದಲ್ಲಿ ಗ್ರಾಮೀಣ ಅಂಚೆ ವಿತರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್(35) ಎಂಬಾತನ ವಿರುದ್ಧ ಆರೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಜೂನ್ 8ರಂದು ರಾತ್ರಿ ಬಂಧಿಸಲಾಯಿತು.

ಬಂಧಿತ ಆರೋಪಿಯನ್ನು ವಿಚಾರಣೆಯ ಬಳಿಕ ಜೂನ್ 9ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಧರ್ಮಸ್ಥಳ ಪ್ರಭಾರ ಸಬ್ ಇನ್ಸ್ಪೆಕ್ಟರ್ ಕಿಶೋರ್ ಪಿ., ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್. ಗಾಣಿಗೇರ ಹಾಗೂ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿತು.

 

Leave a Reply

error: Content is protected !!