







ನೆಲ್ಯಾಡಿ: ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ, ಪುತ್ತೂರು ಇದರ ಆಶ್ರಯದಲ್ಲಿ ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿ ಹಾಗೂ ಮಹಿಳಾ ವೇದಿಕೆಯ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ನೆಲ್ಯಾಡಿಯ ಬಿರ್ವ ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮವು ಭಜನೆ ಹಾಗೂ ಗುರುಪೂಜೆಯೊಂದಿಗೆ ಆರಂಭಗೊಂಡಿತು. ಬಳಿಕ ಸಂಘದ ಅಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ನೆಲ್ಯಾಡಿ ಬಿಲ್ಲವ ಸಂಘದ ಗೌರವಾಧ್ಯಕ್ಷ ಡಾ.ಸದಾನಂದ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು 108 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ನಾರಾಯಣ ಗುರುಗಳ ಸಂದೇಶದಂತೆ ನಾವೆಲ್ಲರೂ ವಿದ್ಯೆಯಿಂದ ಸ್ವತಂತ್ರರಾಗಬೇಕು ಹಾಗೂ ಸಂಘಟನೆಯಿಂದ ಬಲಿಷ್ಠರಾಗಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ವೇಳೆ ನೆಲ್ಯಾಡಿ ಬಿಲ್ಲವ ಸಂಘದ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್, ನೆಲ್ಯಾಡಿ ವಲಯದ ಸಂಚಾಲಕ ಅಜಿತ್ ಕುಮಾರ್ ಪಾಲೇರಿ ಹಾಗೂ ತಾರಾನಾಥ ಪೋಸೊಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 7 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ ಸದಸ್ಯರಾದ ಜನಾರ್ದನ ಬಾಣಜಾಲು, ತುಳಸಿಧರನ್ ಹಾಗೂ ತಾರಾನಾಥ ಪೋಸೊಳಿಗೆ ಅವರನ್ನು ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿತೇಶ್ ಅಂಬರ್ಜೆಯವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೆ ಧನಸಹಾಯ ನೀಡಿ ಸಹಕರಿಸಿದ ದಾನಿಗಳನ್ನು ಶಾಲು ಹಾಗೂ ಪುಷ್ಪ ನೀಡಿ ಗೌರವಿಸಲಾಯಿತು. ಪುಸ್ತಕ ವಿತರಣೆಯ ಪಟ್ಟಿಯನ್ನು ಮಹಿಳಾ ಘಟಕದ ಅಧ್ಯಕ್ಷೆ ದೀಕ್ಷಾ ಸಾಲಿಯಾನ್ ವಾಚಿಸಿದರು. ನೋಣಯ್ಯ ಅಂಬರ್ಜೆ ಸ್ವಾಗತಿಸಿದರು. ಮೋಹನ್ ಕುಮಾರ್ ಡಿ. ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ಅಂಬರ್ಜೆ ಪ್ರಾರ್ಥಿಸಿದರು. ಲಿತಿನ್ ಕುಮಾರ್ ವಂದಿಸಿದರು.
ಇದೇ ಸಂದರ್ಭದಲ್ಲಿ ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಸಂಚಾಲಕ ಅಜಿತ್ ಕುಮಾರ್ ಪಾಲೇರಿ, ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್, ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮೋಹನ್ ಕುಮಾರ್ ಡಿ. ಹಾಗೂ ಬಿರ್ವ ಹೋಟೆಲ್ ಮಾಲಕ ಸಂತೋಷ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಚಂದ್ರಶೇಖರ್ ಬಿ., ಜನಾರ್ದನ ಬಿ., ಸುಂದರ ಬಿ., ತುಳಸಿಧರನ್, ಶಿವರಾಜ್, ಮಹೇಶ್ ಬರೆಗುಡ್ಡೆ, ರಕ್ಷಣ್, ಕೌಶಿಕ್, ದೀಕ್ಷಾ ಸಾಲಿಯಾನ್, ಉಷಾ, ಅನಿತಾ ಸುರೇಶ್, ವೀರಪ್ಪ ಅಂಬರ್ಜೆ, ಶ್ರೀಧರ್ ಅಂಬರ್ಜೆ, ಪುರಂದರ ಅಂಬರ್ಜೆ ಹಾಗೂ ರಕ್ಷಿತಾ ಅಂಬರ್ಜೆ ಸೇರಿದಂತೆ ಹಲವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



