









ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಸನುಷ ಅವರು ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಹೆಮ್ಮೆಯಾಗಿ ಹೊರಹೊಮ್ಮಿದ್ದಾರೆ.
ಪಾಥ್ ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲಾದ ಏಳನೇ ಆವೃತ್ತಿಯ ಮಿಸ್ ಟೀನ್ ಇಂಡಿಯಾ ಕರ್ನಾಟಕ-2026 ಸೌಂದರ್ಯ ಸ್ಪರ್ಧೆಯು ಜುಲೈ 21ರಂದು ಮಂಗಳೂರಿನ ಬೋಳೂರಿನಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಅರಸಿನಮಕ್ಕಿಯ ಸೌಮ್ಯ ಮತ್ತು ದಂಪತಿಯ ಪುತ್ರಿ ಸನುಷ ಅವರು ಫಸ್ಟ್ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡು ಮುಂದಿನ ಹಂತದ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಕೊಕ್ಕಡದ ಸೈಂಟ್ ಫ್ರಾನ್ಸಿಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಸನುಷ ಅವರಿಗೆ ನೃತ್ಯ, ಕ್ರೀಡೆ ಹಾಗೂ ಮಾಡೆಲಿಂಗ್ ಕ್ಷೇತ್ರಗಳ ಬಗ್ಗೆ ವಿಶೇಷ ಆಸಕ್ತಿ ಇದೆ. ಮಾಡೆಲಿಂಗ್ ಅವರ ನೆಚ್ಚಿನ ಹವ್ಯಾಸವಾಗಿದ್ದು, ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಮೂರು ವಿಭಾಗಗಳಿಂದ ಒಟ್ಟು 35 ಸ್ಪರ್ಧಿಗಳು ಭಾಗವಹಿಸಿದ್ದರು. ಟೀನ್ ವಿಭಾಗದಲ್ಲಿ ಸನುಷ ಅವರು ಟಾಪ್-10 ಫೈನಲಿಸ್ಟ್‌ಗಳ ಪೈಕಿ ಸ್ಥಾನ ಪಡೆದಿದ್ದರು. ಗ್ರ್ಯಾಂಡ್ ಫಿನಾಲೆಯಲ್ಲಿ ಟ್ರೆಡಿಷನಲ್, ವೆಸ್ಟರ್ನ್, ಟ್ಯಾಲೆಂಟ್, ಪರಿಚಯ ಹಾಗೂ ಪ್ರಶ್ನೋತ್ತರ ಸುತ್ತುಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ ಫಸ್ಟ್ ರನ್ನರ್ ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡರು.
ಸನುಷ ಅವರು ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರತಿಭಾ ಕಾರಂಜಿ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಕಾಲೇಜು ವಿಭಾಗದಲ್ಲಿ ತಾಲೂಕು ಮಟ್ಟದ ಸ್ಪೋರ್ಟ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಲ್ಲದೆ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ‘ಕಲಾ ತಿಲಕ’ ಪ್ರಶಸ್ತಿಯನ್ನು ಪಡೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಸೌಂದರ್ಯ ಸ್ಪರ್ಧೆಗೆ ಮಂಗಳೂರಿನ ಪ್ರಸಿದ್ಧ ಮಾಡೆಲಿಂಗ್ ತರಬೇತಿ ಸಂಸ್ಥೆ ಪಾಥ್ ವೇನಲ್ಲಿ ದೀಪಕ್ ಗಂಗೂಲಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು. ಬಾಲ್ಯದಿಂದಲೇ ಸಾಂಸ್ಕೃತಿಕ ಚಟುವಟಿಕೆಗಳು, ನೃತ್ಯ ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಸನುಷ ಅವರು ಆತ್ಮವಿಶ್ವಾಸ ಮತ್ತು ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಉತ್ತಮ ಸಾಧನೆ ಮಾಡಬೇಕೆಂಬ ಕನಸನ್ನು ಹೊಂದಿರುವ ಸನುಷ ಅವರ ಜೀವನದ ಪ್ರಮುಖ ಗುರಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದಾಗಿದೆ. ದೇಶಸೇವೆಯ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಸಾಧನೆ ಮಾಡಿ ಯುವಜನತೆಗೆ ಮಾದರಿಯಾಗಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಮಗಳ ಸಾಧನೆಗೆ ಹೆಮ್ಮೆ: ತಾಯಿ ಸೌಮ್ಯ
ನಮ್ಮ ಮಗಳ ಈ ಸಾಧನೆಗೆ ತುಂಬಾ ಹೆಮ್ಮೆ ಇದೆ. ನಾವು ಹಳ್ಳಿಯಲ್ಲಿ ವಾಸಿಸುವ ಸಾಮಾನ್ಯ ಕುಟುಂಬದವರು. ಯಾವುದೇ ಹಣಬಲವಿಲ್ಲದೆ ಸನುಷ ತನ್ನ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಛಲದ ಮೂಲಕ ಈ ಮಟ್ಟದ ಸಾಧನೆ ಮಾಡಿದ್ದಾಳೆ. ಹಲವು ಸವಾಲುಗಳ ನಡುವೆಯೂ ಸ್ಪರ್ಧೆಯಲ್ಲಿ ಭಾಗವಹಿಸಿ ಫಸ್ಟ್ ರನ್ನರ್ ಅಪ್ ಸ್ಥಾನ ಪಡೆದಿರುವುದು ನಮಗೆ ಅಪಾರ ಸಂತಸ ತಂದಿದೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸುತ್ತೇವೆ. ಎಂದು ತಾಯಿ ಸೌಮ್ಯ ಸಂತಸ ವ್ಯಕ್ತಪಡಿಸಿದ್ದಾರೆ.



