










ಕಡಬ: ತಾಲೂಕಿನಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಸಿ ಅವೈಜ್ಞಾನಿಕವಾಗಿ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದ್ದು, ಇದರಿಂದ ಸ್ಥಳೀಯ ಸಣ್ಣ ಗುತ್ತಿಗೆದಾರರು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸ್ಥಳೀಯ ಗುತ್ತಿಗೆದಾರರ ಸಂಘದ ಪ್ರತಿನಿಧಿ ಕ್ಸೇವಿಯರ್ ಬೇಬಿ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಸುಮಾರು 60 ರಿಂದ 70 ಮಂದಿ ಗುತ್ತಿಗೆದಾರರು ಈ ಸಮಸ್ಯೆಯಿಂದ ನೇರವಾಗಿ ಬಾಧಿತರಾಗಿದ್ದಾರೆ ಎಂದು ತಿಳಿಸಿದರು.
ಪ್ರತಿದಿನ 15 ರಿಂದ 20 ಮಂದಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿರುವ ಸ್ಥಳೀಯ ಗುತ್ತಿಗೆದಾರರ ಮೇಲೆ ಸುಮಾರು 1,500ಕ್ಕೂ ಹೆಚ್ಚು ಕುಟುಂಬಗಳು ಜೀವನೋಪಾಯಕ್ಕಾಗಿ ಅವಲಂಬಿತವಾಗಿವೆ. ಆದರೆ ಮರಳಿನ ಅಭಾವ ಹಾಗೂ ಅತಿಯಾದ ದರದಿಂದ ಕಾಮಗಾರಿಗಳು ಸ್ಥಗಿತಗೊಳ್ಳುತ್ತಿದ್ದು, ಕಾರ್ಮಿಕರಿಗೆ ಉದ್ಯೋಗವೂ ಇಲ್ಲದಂತಾಗಿದೆ ಎಂದು ಅವರು ಹೇಳಿದರು.
ಗುತ್ತಿಗೆದಾರರ ಪ್ರಕಾರ, 50 ರಿಂದ 60 ಕಿಲೋಮೀಟರ್ ದೂರದಿಂದ ಕಲ್ಲು ತಂದು, ಬೌಲ್ಡರ್ ಮಾಡಿ, ಕ್ರಷರ್‌ನಲ್ಲಿ ಸಂಸ್ಕರಿಸಿದ ಒಂದು ಯೂನಿಟ್ ಜಲ್ಲಿ ಕೇವಲ ₹4,000 ರಿಂದ ₹5,000ಕ್ಕೆ ಲಭ್ಯವಾಗುತ್ತದೆ. ಆದರೆ ಕಡಬ ವ್ಯಾಪ್ತಿಯಲ್ಲೇ 5 ರಿಂದ 6 ಕಿಲೋಮೀಟರ್ ದೂರದಲ್ಲಿರುವ ಮರಳಿಗೆ ₹8,000 ರಿಂದ ₹9,000 ವರೆಗೆ ವಸೂಲಿ ಮಾಡಲಾಗುತ್ತಿದೆ. ಇದು ಸಂಪೂರ್ಣ ಅವೈಜ್ಞಾನಿಕ ದರವಾಗಿದ್ದು, ಸಾರ್ವಜನಿಕರ ಹಗಲು ದರೋಡೆಯಾಗಿದೆ ಎಂದು ಆರೋಪಿಸಿದರು.
ಸ್ಥಳೀಯ ಗುತ್ತಿಗೆದಾರರು ಮರಳು ಕೇಳಿದಾಗ “ಮರಳು ಲಭ್ಯವಿಲ್ಲ” ಎಂದು ಹೇಳಲಾಗುತ್ತಿದೆ. ಆದರೆ ಪ್ರತಿದಿನ 30 ರಿಂದ 40 ಲೋಡ್ ಮರಳು ಕಡಬ ವ್ಯಾಪ್ತಿಯಿಂದ ಸಾಗಾಟವಾಗುತ್ತಿರುವುದು ಕಂಡುಬರುತ್ತಿದೆ. ಮರಳಿನ ಟೆಂಡರ್ ಪಡೆದವರು ಯಾವ ಉದ್ದೇಶದಿಂದ ಈ ರೀತಿಯ ವ್ಯವಸ್ಥೆ ಮಾಡುತ್ತಿದ್ದಾರೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಈ ಪರಿಸ್ಥಿತಿಗೆ ಸ್ಥಳೀಯ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಆರೋಪಿಸಿದ ಗುತ್ತಿಗೆದಾರರು, ಅಧಿಕಾರಿಗಳ ಕಣ್ಣೆದುರೇ ಅಕ್ರಮ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.
ಗುತ್ತಿಗೆದಾರರ ಪ್ರಮುಖ ಬೇಡಿಕೆಗಳು:
ಮರಳಿನ ದರವನ್ನು ಸರ್ಕಾರವೇ ನಿಗದಿಪಡಿಸಬೇಕು. ನಿಗದಿತ ದರದಲ್ಲೇ ಗ್ರಾಹಕರಿಗೆ ಮರಳು ಪೂರೈಸಬೇಕು. ಮರಳು ಮಾರಾಟ ಕೇಂದ್ರಗಳಲ್ಲಿ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ದಾಸ್ತಾನು ಕೇಂದ್ರಗಳಲ್ಲಿ ತೂಕದ ಮಾಪಕ ಅಳವಡಿಸಿ, ತೂಕದ ಪ್ರಮಾಣಪತ್ರವನ್ನು ಗ್ರಾಹಕರಿಗೆ ನೀಡಬೇಕು. ಮರಳು ದಂಧೆಯನ್ನು ತಕ್ಷಣವೇ ನಿಯಂತ್ರಿಸಿ ಸ್ಥಳೀಯ ಗುತ್ತಿಗೆದಾರರಿಗೆ ನ್ಯಾಯಯುತ ದರದಲ್ಲಿ ಮರಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಕಡಬ ತಾಲೂಕಿನ ಎಲ್ಲಾ ಗುತ್ತಿಗೆದಾರರು ಮತ್ತು ಕಾರ್ಮಿಕರು ಒಗ್ಗೂಡಿ ಉಗ್ರ ಹೋರಾಟ ಹಾಗೂ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರರಾದ ವಿನೋದ್ ಪಿ.ಎ., ಸತೀಶ್ ರೈ ಕರ್ಮೆಣ, ಮಹಮ್ಮದ್ ರಪೀಕ್ ಹಾಗೂ ಅಬೂಬಕ್ಕರ್ ಪಿ. ಉಪಸ್ಥಿತರಿದ್ದರು.



