










ನೆಲ್ಯಾಡಿ: ನೆಲ್ಯಾಡಿ–ಕಡಬ ಮುಖ್ಯರಸ್ತೆಯ ಪಡುಬೆಟ್ಟು ಸಮೀಪದ ಕಲ್ಲಚೆಡವು ಪ್ರದೇಶದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಅಪಾಯಕಾರಿಯಾಗಿ ವಾಲಿ ನಿಂತಿದ್ದ ಬೃಹತ್ ಮರಗಳನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ತೆರವುಗೊಳಿಸಿದ್ದು, ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಿದೆ.
ಕಲ್ಲಚೆಡವು ಪ್ರದೇಶದಲ್ಲಿ ಹಲವು ವರ್ಷಗಳಿಂದ ರಸ್ತೆಯ ಎರಡೂ ಬದಿಯಲ್ಲಿ ಬೆಳೆದಿದ್ದ ಬೃಹತ್ ಮರಗಳು ರಸ್ತೆಯತ್ತ ವಾಲಿ ನಿಂತಿದ್ದವು. ಮರಗಳ ಕೆಳಭಾಗದಿಂದ ಹೈಟೆನ್ಷನ್ ವಿದ್ಯುತ್ ತಂತಿಗಳೂ ಹಾದು ಹೋಗುತ್ತಿದ್ದ ಕಾರಣ ಯಾವುದೇ ಕ್ಷಣದಲ್ಲಿ ಮರಗಳು ಕುಸಿದರೆ ವಾಹನ ಸವಾರರು, ಪಾದಚಾರಿಗಳು ಹಾಗೂ ವಿದ್ಯುತ್ ವ್ಯವಸ್ಥೆಗೆ ಭಾರೀ ಅಪಾಯ ಎದುರಾಗುವ ಸಾಧ್ಯತೆ ಇತ್ತು.
ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿದ್ದು, ಪಡುಬೆಟ್ಟು ಅಂಗನವಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ತೆರಳುವ ನೂರಾರು ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಹೀಗಾಗಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಪಡುಬೆಟ್ಟು ಸೌಹಾರ್ದ ಫ್ರೆಂಡ್ಸ್ ಕ್ಲಬ್ ಸೇರಿದಂತೆ ಸ್ಥಳೀಯ ಸಂಘಟನೆಗಳು ನೆಲ್ಯಾಡಿ ಗ್ರಾಮ ಪಂಚಾಯತ್ ಗಮನಕ್ಕೆ ತಂದಿದ್ದರು.
ಈ ಕುರಿತು ನೆಲ್ಯಾಡಿ ಗ್ರಾಮ ಪಂಚಾಯತ್ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿತ್ತು. ಪಂಚಾಯತ್ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮೆಸ್ಕಾಂ ಸಿಬ್ಬಂದಿಯ ಸಹಕಾರದೊಂದಿಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಿದರು. ಇದರಿಂದ ಸಂಭವನೀಯ ದುರಂತವೊಂದು ತಪ್ಪಿದಂತಾಗಿದೆ.
ಮರ ತೆರವು ಕಾರ್ಯದ ವೇಳೆ ನೆಲ್ಯಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪಡುಬೆಟ್ಟು ಸೌಹಾರ್ದ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಲಾಂ ಬಿಲಾಲ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ರಾಮನಗರ, ಸೌಹಾರ್ದ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಮಹಾಲಿಂಗ ಕೆ., ಉಪಾಧ್ಯಕ್ಷ ಇಕ್ಬಾಲ್ ಪಡುಬೆಟ್ಟು, ಸಾಮಾಜಿಕ ಕಾರ್ಯಕರ್ತರಾದ ಅಣ್ಣು ಎಂ., ಸುರೇಶ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.



