










ಉಜಿರೆ: ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ 2026–27ನೇ ಶೈಕ್ಷಣಿಕ ವರ್ಷದ ವಾಣಿಜ್ಯ ಸಂಘದ ಉದ್ಘಾಟನೆ ಹಾಗೂ ಸಿಎ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಹಳೆ ವಿದ್ಯಾರ್ಥಿ ಸಿಎ ಅರ್ಜುನ್ ಶೆಣೈ ಭಾಗವಹಿಸಿ ಮಾತನಾಡಿ, ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ವೃತ್ತಿಯಲ್ಲಿ ಯುವಜನತೆಗೆ ಅಪಾರ ಅವಕಾಶಗಳಿದ್ದು, ದೃಢ ಸಂಕಲ್ಪ, ನಿರಂತರ ಪರಿಶ್ರಮ ಹಾಗೂ ಗುರಿಯತ್ತ ಅಚಲ ನಿಷ್ಠೆಯಿಂದ ಮುನ್ನಡೆಯುವ ಮೂಲಕ ಯಶಸ್ಸು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನಲ್ಲಿ ಆಯೋಜಿಸಲಾಗುವ ಶೈಕ್ಷಣಿಕ, ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಆತ್ಮವಿಶ್ವಾಸ, ನಾಯಕತ್ವ ಗುಣಗಳು ಹಾಗೂ ಭವಿಷ್ಯದ ಯಶಸ್ಸಿಗೆ ಅಗತ್ಯವಾದ ಭದ್ರ ಬುನಾದಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದ ಅವರು, ಪದವಿಪೂರ್ವ ಶಿಕ್ಷಣವೇ ಉನ್ನತ ಶಿಕ್ಷಣ ಹಾಗೂ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಭದ್ರ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳು ಈ ಹಂತವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪ್ರಮೋದ್ ಕುಮಾರ್ ವಾಣಿಜ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಒದಗಿಸುವ ಶೈಕ್ಷಣಿಕ ಹಾಗೂ ಪ್ರತಿಭಾ ವಿಕಾಸದ ಎಲ್ಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಗಮನಾರ್ಹ ಸಾಧನೆ ಮಾಡಿರುವ ಸಿಎ ಅರ್ಜುನ್ ಶೆಣೈ ಅವರನ್ನು ಕಾಲೇಜಿನ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿ ಚರಿತ್ರಾ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಸಂಘದ ಸಂಯೋಜಕರಾದ ಪ್ರಭಾವತಿ ಕಾರ್ಯಕ್ರಮದ ಆಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಬೇಬಿ ಎನ್, ಉಪನ್ಯಾಸಕರಾದ ಸವಿತಾ, ಶೋಭಾ ಹಾಗೂ ಅಶ್ವಿನಿ ಉಪಸ್ಥಿತರಿದ್ದರು. ವಾಣಿಜ್ಯ ಸಂಘದ ಕಾರ್ಯದರ್ಶಿ ಸುಹಾನ್ ವಂದಿಸಿದರು.



