










ರಾಮಕುಂಜ: ಆದಿತ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಸಮಾಜ ಸೇವಕರು, ನಿವೃತ್ತ ಶಿಕ್ಷಕರು ಆದ ರಾಮಕುಂಜ ಗ್ರಾಮದ ಕಲ್ಲೇರಿ ನಿವಾಸಿ ಇ.ರಮೇಶ ಉಪಾಧ್ಯಾಯ(96ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಜು.2ರಂದು ಸಾಯಂಕಾಲ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆ, ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಗಳಲ್ಲಿ ಸುಮಾರು 35ಕ್ಕೂ ಹೆಚ್ಚು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಕೃಷಿ ಚಟುವಟಿಕೆಯ ಜೊತೆಗೆ ಮಕ್ಕಳ ಸಹಭಾಗಿತ್ವದಲ್ಲಿ ಹಲವು ಕಡೆಗಳಲ್ಲಿ ಉದ್ದಿಮೆಯನ್ನು ಆರಂಭಿಸಿದ್ದರು. ಉಪ್ಪಿನಂಗಡಿಯಲ್ಲಿ ಹೋಟೆಲ್ ಆದಿತ್ಯ, ಸುಬ್ರಹ್ಮಣ್ಯದಲ್ಲಿ ಹೋಟೆಲ್ ಆದಿತ್ಯ ನೆಸ್ಟ್, ಧರ್ಮಸ್ಥಳ-ನಿಡ್ಲೆಯಲ್ಲಿ ಆದಿತ್ಯ ವ್ಯೂ ಸಹಿತ ವಿವಿಧ ಉದ್ದಿಮೆಗಳನ್ನು ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಇದರೊಂದಿಗೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳ ಪೂರೈಕೆದಾರರಾಗಿದ್ದರು. ಕೊಡುಗೈ ದಾನಿಗಳು, ನೂರಾರು ಮಂದಿಗೆ ಉದ್ಯೋಗದಾತರೂ ಆಗಿದ್ದ ಇವರು ಸ್ಥಳೀಯ ದೇವಸ್ಥಾನ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಅಭಿವೃದ್ಧಿಯಲ್ಲಿಯೂ ಪ್ರಧಾನ ಪಾತ್ರ ವಹಿಸಿದ್ದರು. ಬಾಲ್ಯದಲ್ಲಿ ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಹಪಾಠಿಯಾಗಿದ್ದರು.
ಮೃತರು ಪುತ್ರರಾದ ಇ.ಕೃಷ್ಣಮೂರ್ತಿ, ಇ.ವಿದ್ಯಾರಣ್ಯ, ಇ.ಮನೋಹರ, ಇ.ತ್ರಿವಿಕ್ರಮ, ಇ.ಸುದರ್ಶನ, ಪುತ್ರಿ ಪ್ರಸನ್ನ, ಅಳಿಯ ರಾಮಚಂದ್ರ ಉಡುಪ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಗಳನ್ನು ಅಗಲಿದ್ದಾರೆ. ಇವರ ಪತ್ನಿ ಯಶೋಧಾ ಅವರು ಕೆಲವರ್ಷಗಳ ಹಿಂದೆ ನಿಧನರಾಗಿದ್ದರು.



