ಉಜಿರೆ: ಗಾಳಿ–ಮಳೆಗೆ ರಾಷ್ಟ್ರೀಯ ಹೆದ್ದಾರಿಗೆ ಮರ ಉರುಳಿ; ಸಂಚಾರ ಅಸ್ತವ್ಯಸ್ತ

ಶೇರ್ ಮಾಡಿ

 

ಉಜಿರೆ: ಗಾಳಿ–ಮಳೆಗೆ ರಾಷ್ಟ್ರೀಯ ಹೆದ್ದಾರಿಗೆ ಮರ ಉರುಳಿ; ಸಂಚಾರ ಅಸ್ತವ್ಯಸ್ತ

ಉಜಿರೆ: ಶನಿವಾರ ಸಂಜೆ ಸುರಿದ ಭಾರೀ ಗಾಳಿ–ಮಳೆಯ ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಟಿ.ಬಿ. ಕ್ರಾಸ್ ಸಮೀಪ ರಸ್ತೆಗೆ ಬೃಹತ್‌ ಮರ ಉರುಳಿ ಬಿದ್ದ ಪರಿಣಾಮ ಸುಮಾರು ಅರ್ಧ ತಾಸು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ಮರ ರಸ್ತೆಯ ಮಧ್ಯಭಾಗಕ್ಕೆ ಉರುಳಿ ಬಿದ್ದಿದ್ದರಿಂದ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಾರು, ಬಸ್, ಲಾರಿ ಸೇರಿದಂತೆ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಕೆಲಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡು ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.

ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಹಾಗೂ ವಾಹನ ಚಾಲಕರು ಸ್ವಯಂಪ್ರೇರಿತರಾಗಿ ಮರವನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸುವ ಕಾರ್ಯಾಚರಣೆಗೆ ಮುಂದಾದರು. ಸುಮಾರು ಅರ್ಧ ತಾಸಿನ ಕಾರ್ಯಾಚರಣೆಯ ಬಳಿಕ ರಸ್ತೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಲಾಯಿತು.

ಅದೃಷ್ಟವಶಾತ್ ಮರ ಉರುಳಿದ ವೇಳೆ ಯಾವುದೇ ವಾಹನದ ಮೇಲೆ ಬೀಳದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಗಾಳಿ–ಮಳೆಯ ಸಂದರ್ಭದಲ್ಲಿ ಹೆದ್ದಾರಿ ಬದಿಯ ಅಪಾಯಕಾರಿ ಮರಗಳ ತೆರವಿಗೆ ಸಂಬಂಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

 

Leave a Reply

error: Content is protected !!