ರೆಂಜಿಲಾಡಿ: ಸ್ಯಾಂತೋಮ್ ವಿದ್ಯಾನಿಕೇತನದಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

ಶೇರ್ ಮಾಡಿ

 

ರೆಂಜಿಲಾಡಿ: ಸ್ಯಾಂತೋಮ್ ವಿದ್ಯಾನಿಕೇತನದಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

ರೆಂಜಿಲಾಡಿ: ಸ್ಯಾಂತೋಮ್ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆ, ರೆಂಜಿಲಾಡಿಯಲ್ಲಿ 2026–27ನೇ ಶೈಕ್ಷಣಿಕ ವರ್ಷದ ಪ್ರಥಮ ಶಿಕ್ಷಕ-ರಕ್ಷಕ ಸಂಘದ ಸಭೆಯು ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕರಾದ ರೆ.ಫಾ.ಪೌಲ್ ಜೇಕಬ್ ವಹಿಸಿ ಮಾತನಾಡಿದ ಅವರು ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಶಿಸ್ತು, ಸಮಯಪಾಲನೆ ಹಾಗೂ ಪ್ರಾಮಾಣಿಕತೆ ಅತ್ಯಂತ ಅವಶ್ಯಕವಾಗಿದ್ದು, ಈ ಮೌಲ್ಯಗಳನ್ನು ಪೋಷಕರು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ಪೋಷಕರು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದರೆ, ವಿದ್ಯಾರ್ಥಿಗಳು ಇನ್ನಷ್ಟು ಕ್ರಿಯಾಶೀಲರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಾಲೆಯ ಮುಖ್ಯಶಿಕ್ಷಕ ಅರುಳ್ ಸಾಮಿ ಅವರು ಶಾಲೆಯ 2026–27ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳ ಯೋಜನೆಗಳನ್ನು ಸಭೆಗೆ ವಿವರಿಸಿದರು. ಸಭೆಯಲ್ಲಿ ನಡೆದ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಲಕ್ಷ್ಮಣಗೌಡ ಸಾಂತ್ಯಡ್ಕ ಅವರು ಸತತ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಪ್ರಫುಲ್ಲ ರೈ ಮರ್ಧಾಳ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮಣಗೌಡ ಸಾಂತ್ಯಡ್ಕ ಮಾತನಾಡಿ, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬ ಪೋಷಕರ ಸಹಕಾರ ಅಗತ್ಯವಾಗಿದ್ದು, ಎಲ್ಲರೂ ಒಂದಾಗಿ ಕೈಜೋಡಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಮತ್ತಷ್ಟು ಉತ್ತಮಗೊಳಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಶಾಲೆಯ ಅಭಿವೃದ್ಧಿಗೆ ಪೂರಕವಾಗುವ ಉದ್ದೇಶದಿಂದ ವಿವಿಧ ಸಮಿತಿಗಳನ್ನು ರಚಿಸಲಾಯಿತು. ವಿದ್ಯಾರ್ಥಿಗಳ ಪೋಷಕರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕ ವೃಂದ ಸಭೆಯಲ್ಲಿ ಭಾಗವಹಿಸಿದ್ದರು.

ಕ್ರಿಸ್ಟೀನಾ ಪಿ.ಕೆ. ಸ್ವಾಗತಿಸಿದರು.ಸಂಧ್ಯಾ ಶಿಕ್ಷಕ-ರಕ್ಷಕ ಸಂಘದ ವರದಿಯನ್ನು ವಾಚಿಸಿದರು. ಸಹಶಿಕ್ಷಕಿ ಶ್ವೇತಾ ನಿರೂಪಿಸಿದರು. ವಿಶ್ವತ್ ಪಿ. ವಂದಿಸಿದರು.

 

Leave a Reply

error: Content is protected !!