ಬೆಳ್ತಂಗಡಿ: ಕಳ್ಳತನಕ್ಕೆ ಹೋದ ವೇಳೆ ಸಹಚರನ ಸಾವು ಪ್ರಕರಣ ಭೇದಿಸಿದ ಬೆಳ್ತಂಗಡಿ ಪೊಲೀಸರು; ಸರಣಿ ಕಳ್ಳ ಬಂಧನ

ಶೇರ್ ಮಾಡಿ

 

ಬೆಳ್ತಂಗಡಿ: ಕಳ್ಳತನಕ್ಕೆ ಹೋದ ವೇಳೆ ಸಹಚರನ ಸಾವು ಪ್ರಕರಣ ಭೇದಿಸಿದ ಬೆಳ್ತಂಗಡಿ ಪೊಲೀಸರು; ಸರಣಿ ಕಳ್ಳ ಬಂಧನ

ಬೆಳ್ತಂಗಡಿ: ಕಳೆದ ಜುಲೈ 1ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣವಾಗಿ ದಾಖಲಾಗಿದ್ದ ಮುಶ್ತಕ್ ಸಾವಿನ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಇದು ಕಳ್ಳತನದ ವೇಳೆ ನಡೆದ ಆಕಸ್ಮಿಕ ಸಾವು ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಕರಣವನ್ನು ಭೇದಿಸಿರುವ ಬೆಳ್ತಂಗಡಿ ಪೊಲೀಸರು ಸರಣಿ ಕಳ್ಳನನ್ನು ಬಂಧಿಸಿ, ಕಳವು ಮಾಡಿದ 550 ಕೆಜಿ ಅಲ್ಯೂಮಿನಿಯಂ ವೈರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜುಲೈ 1ರಂದು ದಾಖಲಾಗಿದ್ದ ಯುಡಿಆರ್ ಸಂಖ್ಯೆ 35/2026 ಪ್ರಕರಣದ ತನಿಖೆ ವೇಳೆ, ಮುಶ್ತಕ್ ಮೃತಪಟ್ಟ ಸ್ಥಳದಲ್ಲಿ ಕಳ್ಳತನ ನಡೆದಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಯಿತು.

ತನಿಖೆಯ ವೇಳೆ ಬೆಳ್ತಂಗಡಿ ಕಾಶಿಪಟ್ನ ನಿವಾಸಿ ಪಿ. ಇಬ್ರಾಹಿಂ ಲತೀಫ್ (36) ಎಂಬಾತನನ್ನು ಜುಲೈ 14ರಂದು ಬಂಧಿಸಲಾಯಿತು. ವಿಚಾರಣೆ ವೇಳೆ ಆತ, ಮೃತ ಮುಶ್ತಕ್ ಹಾಗೂ ಮತ್ತೋರ್ವ ಆರೋಪಿಯೊಂದಿಗೆ ಸೇರಿ ಜೂನ್ 30ರಂದು ರಾತ್ರಿ ಬೆಳ್ತಂಗಡಿ ಕುವೆಟ್ಟು ಶಕ್ತಿನಗರದಲ್ಲಿರುವ ಸಂಸ್ಥೆಯೊಂದರ ಆವರಣದಿಂದ ಅಲ್ಯೂಮಿನಿಯಂ ಹಾಗೂ ಕಬ್ಬಿಣದ ಸಾಮಗ್ರಿಗಳನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಕಳ್ಳತನ ನಡೆಸುತ್ತಿದ್ದ ವೇಳೆ ಮುಶ್ತಕ್‌ನ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ ಎಂಬ ಮಾಹಿತಿ ವಿಚಾರಣೆಯಲ್ಲಿ ಬಹಿರಂಗವಾಗಿದೆ. ಆರೋಪಿಯಿಂದ ಕಳವು ಮಾಡಲಾಗಿದ್ದ ಸುಮಾರು 550 ಕೆಜಿ ಅಲ್ಯೂಮಿನಿಯಂ ವೈರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನೂ ಆರೋಪಿಯ ವಿಚಾರಣೆ ವೇಳೆ, ಈತ ವೇಣೂರು, ಉಪ್ಪಿನಂಗಡಿ, ಅರೆಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಸೇರಿದಂತೆ ಒಟ್ಟು 16 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಬೆಳ್ತಂಗಡಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

 

Leave a Reply

error: Content is protected !!