ಬೈಕ್–ಸ್ಕೂಟಿ ಡಿಕ್ಕಿ: ಡಿಪ್ಲೊಮಾ ವಿದ್ಯಾರ್ಥಿ ದುರ್ಮರಣ

ಶೇರ್ ಮಾಡಿ

 

ಬೈಕ್–ಸ್ಕೂಟಿ ಡಿಕ್ಕಿ: ಡಿಪ್ಲೊಮಾ ವಿದ್ಯಾರ್ಥಿ ದುರ್ಮರಣ

ಬೆಳ್ತಂಗಡಿ: ತಾಲೂಕಿನ ಮದ್ದಡ್ಕ ಗ್ರಾಮದ ಮಸೀದಿ ಸಮೀಪ ಮಂಗಳೂರು–ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ಬೈಕ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಡಿಪ್ಲೊಮಾ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮ ಬಳ್ಳಮಂಜದ ದರ್ಜೆದಕೊಡಿ ನಿವಾಸಿ ರಾಮಣ್ಣ ಗೌಡ ಅವರ ಪುತ್ರ ಕೌಶಿಕ್ ಗೌಡ (19) ಎಂದು ಗುರುತಿಸಲಾಗಿದೆ. ಅವರು ಬಂಟ್ವಾಳದ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಅಪಘಾತದಲ್ಲಿ ಹಿಂಬದಿ ಸವಾರ ಮಡಂತ್ಯಾರು ಸಮೀಪದ ಪಾರೆಂಕಿ ಗ್ರಾಮದ ಅಚ್ಚಬೆ ನಿವಾಸಿ ಭರತ್ (20) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಭ್ಯ ಮಾಹಿತಿಯಂತೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸಂಚರಿಸುತ್ತಿದ್ದ ವೇಳೆ ಸಂಪರ್ಕ ರಸ್ತೆಯಿಂದ ಸ್ಕೂಟಿಯೊಂದು ಏಕಾಏಕಿ ಹೆದ್ದಾರಿಗೆ ಅಡ್ಡ ಬಂದ ಪರಿಣಾಮ ಬೈಕ್ ಹಾಗೂ ಸ್ಕೂಟಿ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೌಶಿಕ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಪರಿಸರವು ಅಪಘಾತ ವಲಯವಾಗಿದ್ದು ಇಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

 

Leave a Reply

error: Content is protected !!