ನೆಲ್ಯಾಡಿ ಸಂತ ಜಾರ್ಜ್ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಉದ್ಘಾಟನೆ










ನೆಲ್ಯಾಡಿ: ಇತ್ತೀಚಿನ ಕಾಲಘಟ್ಟದಲ್ಲಿ ಯುವಕರು ಯಾವ ದಾರಿಯತ್ತ ಸಾಗುತ್ತಿದ್ದಾರೆ ಎಂಬುದೇ ಯಕ್ಷಪ್ರಶ್ನೆಯಾಗಿದ್ದು, ಯೌವ್ವನ ಎಂಬುದು ಪ್ರಕೃತಿ ಕೊಟ್ಟ ಅಮೂಲ್ಯ ದಾನ. ಅದನ್ನು ಸದುಪಯೋಗಪಡಿಸಿಕೊಂಡು ಜೀವನವನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಬೇಕು ಎಂದು ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಹೇಳಿದರು.

ಅವರು ಬುಧವಾರ ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2026-27ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಎನ್‌ಎಸ್‌ಎಸ್ ಸ್ವಯಂಸೇವಕ ವಿದ್ಯಾರ್ಥಿಗಳ ಧ್ಯೇಯಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಅಬ್ರಹಾಂ ವರ್ಗೀಸ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಎನ್‌ಎಸ್‌ಎಸ್ ಸ್ವಯಂಸೇವಕರಿಗೆ ಬ್ಯಾಡ್ಜ್‌ಗಳನ್ನು ವಿತರಿಸಿದರು.
ನಾವು ಹಳ್ಳಿಯಿಂದ ಬಂದವರು ಎಂಬ ಕೀಳರಿಮೆ ಮನೋಭಾವ ಬೆಳೆಸಿಕೊಳ್ಳಬಾರದು. ಪ್ರತಿಯೊಬ್ಬರೂ ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಜೀವನದಲ್ಲಿ ಗುರಿ ಹೊಂದಬೇಕು. ಸೋಲು ಬಂದಾಗ ಕುಗ್ಗದೇ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು. ಯೌವ್ವನದಲ್ಲಿಯೇ ದೇವರನ್ನು ನೆನಪಿಸಿಕೊಂಡು, ಭಯಭಕ್ತಿಯಿಂದ ಬದುಕುವುದು ಜೀವನದ ಯಶಸ್ಸಿಗೆ ಅಗತ್ಯ ಎಂದು ಅವರು ಹೇಳಿದರು. ವಿದ್ಯಾಸಂಸ್ಥೆಯಲ್ಲಿ ಎನ್‌ಎಸ್‌ಎಸ್ ಆರಂಭವಾಗಿ 36 ವರ್ಷಗಳು ಪೂರ್ಣಗೊಂಡಿರುವುದನ್ನು ಸ್ಮರಿಸಿದ ಅವರು ಆರಂಭಿಕ ದಿನಗಳಲ್ಲಿ ವಾರ್ಷಿಕ ಶಿಬಿರಗಳನ್ನು ಗ್ಯಾಸ್ ಲೈಟ್ ಸಹಾಯದಿಂದ ನಡೆಸುತ್ತಿದ್ದೆವು. ಎನ್‌ಎಸ್‌ಎಸ್‌ನ ಸ್ಪೂರ್ತಿ, ಉತ್ಸಾಹ ಮತ್ತು ಧ್ಯೇಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಯಂಸೇವಕರಿಗೆ ಅನೇಕ ಅವಕಾಶಗಳಿದ್ದು, ಅವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಕಲಿತ ಒಳ್ಳೆಯ ಮೌಲ್ಯಗಳನ್ನು ಎಂದಿಗೂ ಬಿಟ್ಟು ಹೋಗಬಾರದು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನೆಲ್ಯಾಡಿ ಮಂಗಳೂರು ವಿ ವಿ ಘಟಕ ಕಾಲೇಜಿನ ಉಪನ್ಯಾಸಕಿ ಶ್ರುತಿ ಮಾತನಾಡಿ ಎನ್‌ಎಸ್‌ಎಸ್ ನಿಷ್ಪಕ್ಷಪಾತ ಸೇವಾ ಸಂದೇಶವನ್ನು ಸಮಾಜಕ್ಕೆ ನೀಡುತ್ತದೆ. ಸಮಾಜಸೇವೆಯತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ದಾರಿಯಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸ್ವೀಕರಿಸುವ ಪ್ರತಿಜ್ಞೆಯನ್ನು ಜೀವನದಲ್ಲಿ ಅನುಷ್ಠಾನಗೊಳಿಸಬೇಕು ಇಂದಿನ ವಿದ್ಯಾರ್ಥಿಗಳು ಶಿಸ್ತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಶಿಸ್ತು ಎನ್ನುವುದು ಮರದ ಬೇರುಗಳಂತಿದ್ದು, ಅದು ವ್ಯಕ್ತಿಯ ಜೀವನದಲ್ಲಿ ಗಟ್ಟಿಯಾಗಿ ಬೇರು ಬಿಟ್ಟಿರಬೇಕು. ವಾರ್ಷಿಕ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಐಕ್ಯತೆ, ಸಹಕಾರ ಮತ್ತು ಸೇವಾಮನೋಭಾವ ಬೆಳೆಯುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್ ವಹಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಹಬಾಳ್ವೆ ಮತ್ತು ಒಗ್ಗಟ್ಟಿನ ಗುಣಗಳನ್ನು ಬೆಳೆಸುತ್ತದೆ. ಇವು ಮುಂದಿನ ಜೀವನ ಹಂತಗಳಲ್ಲಿ ಯಶಸ್ಸು ಸಾಧಿಸಲು ಬಹುಮುಖ್ಯ ಎಂದರು.
ಕಾಲೇಜಿನ ಪ್ರಾಚಾರ್ಯ ಹಾಗೂ ಎನ್‌ಎಸ್‌ಎಸ್ ನಿರ್ದೇಶಕ ಏಲಿಯಾಸ್ ಎಂ.ಕೆ. ರಾಷ್ಟ್ರೀಯ ಸೇವಾ ಯೋಜನೆಯ ಪ್ರತಿಜ್ಞಾವಿಧಿಯನ್ನು ಸ್ವಯಂಸೇವಕರಿಗೆ ಬೋಧಿಸಿದರು.
ವೇದಿಕೆಯಲ್ಲಿ ಪಿಯುಸಿ ವಿಭಾಗದ ಸಂಯೋಜಕ ಕಿರಣ್ ರೈ, ಎನ್‌ಎಸ್‌ಎಸ್ ಘಟಕ ನಾಯಕರಾದ ರಕ್ಷಿತ್ ಹಾಗೂ ಅಶ್ವಿನಿ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕಿ ಸವಿತಾ ಸ್ವಾಗತಿಸಿದರು. ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಹಾಗೂ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ. ಕಾರ್ಯಕ್ರಮ ನಿರೂಪಿಸಿದರು. ಸ್ವಯಂಸೇವಕಿ ಅಶ್ವಿನಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಭಾಗವಹಿಸಿದ್ದರು.



