ಕಡಬದಲ್ಲಿ ಪ್ರೇಮಿಗಳ ಜಗಳಕ್ಕೆ ಚರಂಡಿ ಸೇರಿದ ಕಾರಿನ ಕೀ! ನಾಲ್ಕು ಗಂಟೆಗಳ ಹುಡುಕಾಟ; ಸಂತೆಕಟ್ಟೆಯಲ್ಲಿ ಕುತೂಹಲದ ದೃಶ್ಯ, ವೈರಲ್ ಆಯ್ತು ವೀಡಿಯೊ!

ಶೇರ್ ಮಾಡಿ

 

ಕಡಬ: ಪ್ರೇಮಿಗಳ ನಡುವಿನ ಸಣ್ಣ ಮಾತಿನ ಚಕಮಕಿ ಅನಿರೀಕ್ಷಿತ ತಿರುವು ಪಡೆದು ಕಾರಿನ ಕೀ ಚರಂಡಿಗೆ ಎಸೆಯಲ್ಪಟ್ಟ ಪರಿಣಾಮ ಸುಮಾರು ನಾಲ್ಕು ಗಂಟೆಗಳ ಕಾಲ ಕೀಗಾಗಿ ಹುಡುಕಾಟ ನಡೆಸಿದ ಸ್ವಾರಸ್ಯಕರ ಘಟನೆ ಶುಕ್ರವಾರ ಕಡಬ ಸಂತೆಕಟ್ಟೆ ಪ್ರದೇಶದಲ್ಲಿ ನಡೆದಿದೆ.

ಲಭ್ಯವಾದ ಮಾಹಿತಿಯ ಪ್ರಕಾರ, ಈಶ್ವರಮಂಗಲ ಮೂಲದ ಯುವಕನೊಬ್ಬ ಸ್ನೇಹಿತನ ಕಾರಿನಲ್ಲಿ ಕಡಬಕ್ಕೆ ಆಗಮಿಸಿದ್ದ. ಜನ್ಮದಿನದ ಶುಭಾಶಯ ತಿಳಿಸಲು ಸಂತೆಕಟ್ಟೆ ಸಮೀಪದ ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಿಚಯದ ಯುವತಿಯನ್ನು ಭೇಟಿ ಮಾಡಲು ತೆರಳಿದ್ದ ಎನ್ನಲಾಗಿದೆ. ಕಚೇರಿ ಕಟ್ಟಡದ ಮೊದಲ ಮಹಡಿಯಲ್ಲಿ ಇಬ್ಬರ ನಡುವೆ ವೈಯಕ್ತಿಕ ವಿಷಯವೊಂದಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದ್ದು, ವಾಗ್ವಾದ ತಾರಕಕ್ಕೇರಿದ ವೇಳೆ ಕೋಪಗೊಂಡ ಯುವತಿ ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಕಸಿದು ಕೆಳಗಿದ್ದ ಚರಂಡಿಗೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಕೀ ಕೊಳಚೆ ನೀರು ಮತ್ತು ಹೂಳಿನಲ್ಲಿ ಬಿದ್ದು ಕಾಣೆಯಾಗಿದ್ದರಿಂದ ಕಾರನ್ನು ತೆರೆಯಲು ಸಾಧ್ಯವಾಗದೆ ಯುವಕ ಸ್ಥಳೀಯರ ಸಹಾಯದೊಂದಿಗೆ ಚರಂಡಿಯೊಳಗೆ ಶೋಧ ಕಾರ್ಯ ಆರಂಭಿಸಿದ್ದಾನೆ. ಚರಂಡಿ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ ಸಾಕಷ್ಟು ಹುಡುಕಾಟ ನಡೆಸಿದರೂ ಕಾರಿನ ಕೀ ಪತ್ತೆಯಾಗಲಿಲ್ಲ.

ಜನನಿಬಿಡ ಪ್ರದೇಶವಾದ ಸಂತೆಕಟ್ಟೆಯಲ್ಲಿ ಚರಂಡಿಯೊಳಗೆ ಕಾರಿನ ಕೀ ಹುಡುಕುತ್ತಿರುವ ದೃಶ್ಯ ಕಂಡು ಸಾರ್ವಜನಿಕರು ಕುತೂಹಲದಿಂದ ಜಮಾಯಿಸಿದರು. ಹಲವು ಗಂಟೆಗಳ ಕಾಲ ನಡೆದ ಹುಡುಕಾಟವೂ ಫಲ ನೀಡದ ಹಿನ್ನೆಲೆಯಲ್ಲಿ ಯುವಕ ಕಾರನ್ನು ಅಲ್ಲಿಯೇ ಬಿಟ್ಟು, ಸಂಜೆ ಸುಮಾರು 7.30ರ ವೇಳೆಗೆ ರಿಕ್ಷಾದಲ್ಲಿ ಮನೆಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,”ಪ್ರೇಮಿಗಳ ಜಗಳಕ್ಕೆ ಚರಂಡಿ ಸೇರಿದ ಕಾರಿನ ಕೀ” ಎಂಬ ಮಾತು ಸಾರ್ವಜನಿಕರ ನಡುವೆ ಚರ್ಚೆಯ ವಿಷಯವಾಗಿದೆ. ಘಟನೆ ಹಾಸ್ಯಾಸ್ಪದ ತಿರುವು ಪಡೆದಿದ್ದರೂ, ಸಂತೆಕಟ್ಟೆಯಲ್ಲಿ ಕೆಲಕಾಲ ಕುತೂಹಲದ ವಾತಾವರಣ ನಿರ್ಮಾಣವಾಗಿತ್ತು.

CALL NOW 8606485844

 

Leave a Reply

error: Content is protected !!