










ಬಂಟ್ವಾಳ: ವೃದ್ಧೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಅವರ ಚಿನ್ನಾಭರಣಗಳನ್ನು ದೋಚಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಂಟ್ವಾಳ ತಾಲೂಕಿನ ಅಮ್ಮುಂಜೆ ನಿವಾಸಿ ಬೆನಡಿಕ್ಟ್ ಕಾರ್ಲೋ (73) ಅವರ ಆರೈಕೆ ನೋಡಿಕೊಳ್ಳುತ್ತಿದ್ದ ಅಮ್ಟಾಡಿ ನಿವಾಸಿ ಕು.ಏಲ್ಮಾ ಪ್ರೆಶ್ಚಿತ್ ಬರೆಟ್ರೋ (23) ಎಂಬಾಕೆ, ವೃದ್ಧೆಯ ಬಳಿಯಿದ್ದ ಚಿನ್ನಾಭರಣಗಳನ್ನು ಕಳವು ಮಾಡುವ ಉದ್ದೇಶದಿಂದ ತನ್ನ ಸ್ನೇಹಿತ ನರಿಕೊಂಬು ನಿವಾಸಿ ಸತೀಶ ನಾಯಕ್ (28) ಎಂಬಾತನೊಂದಿಗೆ ಸಂಚು ರೂಪಿಸಿದ್ದಳು. ಮೊದಲಿಗೆ ವೃದ್ಧೆ ಸೇವಿಸುವ ಆಹಾರದಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದರೂ ಅದು ವಿಫಲವಾಗಿತ್ತು. ನಂತರ ಮತ್ತೋರ್ವ ಆರೋಪಿ ನರಿಕೊಂಬು ನಿವಾಸಿ ಚರಣ್ ಕುಮಾರ್ (31)ನ ಸಹಾಯ ಪಡೆದು, 2021ರ ಜನವರಿ 25ರಂದು ರಾತ್ರಿ ಬೆನಡಿಕ್ಟ್ ಕಾರ್ಲೋ ಅವರನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದರು. ಬಳಿಕ ಅವರ ಬಳಿಯಿದ್ದ 61.070 ಗ್ರಾಂ ತೂಕದ, ಅಂದಿನ ಸುಮಾರು ₹3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ, ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದರು.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆಗಿನ ಬಂಟ್ವಾಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕರಾಗಿದ್ದ ಪ್ರಸನ್ನ ಎಂ.ಎಸ್. ಅವರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಆಗಿನ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಟಿ.ಡಿ. ನಾಗರಾಜ್ ಅವರು ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಜು.28ರಂದು ಮೂವರು ಆರೋಪಿಗಳೂ ಅಪರಾಧಿಗಳು ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.



