










ಮಂಗಳೂರು: ಮಾದಕ ವಸ್ತುಗಳ ಜಾಲದ ವಿರುದ್ಧ ಸಮರ ಸಾರಿರುವ ಮಂಗಳೂರು ನಗರ ಪೊಲೀಸರು ಬುಧವಾರ ಸುಮಾರು ₹82 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ನಾಶಪಡಿಸುವ ಮೂಲಕ ಮಹತ್ವದ ಕಾರ್ಯಾಚರಣೆಗೆ ಸಾಕ್ಷಿಯಾದರು.
ಮಂಗಳೂರು ನಗರದ ಮುಲ್ಕಿಯ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿರುವ ರಾಮ್ಕಿ ಎನರ್ಜಿ ಅಂಡ್ ಎನ್ವಿರಾನ್ಮೆಂಟ್ ಲಿಮಿಟೆಡ್ (Re Sustainability Healthcare Solutions Ltd.) ಸಂಸ್ಥೆಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ, ನ್ಯಾಯಾಲಯದ ಅನುಮತಿ ಪಡೆದು ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಡ್ರಗ್ ಡಿಸ್ಪೋಸಲ್ ಕಮಿಟಿ (Drug Disposal Committee) ಸಮಕ್ಷಮ ಸುಟ್ಟು ನಾಶಪಡಿಸಲಾಯಿತು.
2026ನೇ ಸಾಲಿನಲ್ಲಿ ಇದುವರೆಗೆ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ 87 ಎನ್‌ಡಿಪಿಎಸ್ (NDPS) ಪ್ರಕರಣಗಳು ದಾಖಲಾಗಿದ್ದು, 157 ಮಾದಕ ವಸ್ತು ಮಾರಾಟಗಾರರನ್ನು (Peddlers) ಬಂಧಿಸಲಾಗಿದೆ. ಈ ಕಾರ್ಯಾಚರಣೆಗಳಲ್ಲಿ ಒಟ್ಟು ₹8,18,30,130 ಮೌಲ್ಯದ 148 ಕೆಜಿ 615 ಗ್ರಾಂ ಗಾಂಜಾ, 7 ಕೆಜಿ 165 ಗ್ರಾಂ ಎಂ.ಡಿ.ಎಂ.ಎ., 1 ಕೆಜಿ 705 ಗ್ರಾಂ ಹೈಡ್ರೋ ವೀಡ್ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 463 ಮಂದಿಯ ವಿರುದ್ಧ 356 ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ಬಾರಿ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ 16 ಪೊಲೀಸ್ ಠಾಣೆಗಳ 59 ಎನ್‌ಡಿಪಿಎಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಯಿತು.
ನಾಶಪಡಿಸಲಾದ ಮಾದಕ ವಸ್ತುಗಳಲ್ಲಿ 450 ಕೆಜಿ ಗಾಂಜಾ, 43 ಕೆಜಿ 260 ಗ್ರಾಂ ಎಂ.ಡಿ.ಎಂ.ಎ., 80 ಗ್ರಾಂ ಚರಸ್, 880 ಗ್ರಾಂ ಹೈಡ್ರೋ ವೀಡ್ ಗಾಂಜಾ ಹಾಗೂ 1 ಕೆಜಿ 200 ಗ್ರಾಂ ಭಾಂಗ್ ಸೇರಿದ್ದು, ಇವುಗಳ ಒಟ್ಟಾರೆ ಅಂದಾಜು ಮೌಲ್ಯ ಸುಮಾರು ₹82 ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ.
ನಾಶಪಡಿಸಲಾದ ಮಾದಕ ವಸ್ತುಗಳಲ್ಲಿ ಪ್ರಮುಖವಾಗಿ 2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಸುಮಾರು ₹75 ಕೋಟಿ ಮೌಲ್ಯದ 37 ಕೆಜಿ ಎಂ.ಡಿ.ಎಂ.ಎ., 2025ರಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಸುಮಾರು ₹4.47 ಕೋಟಿ ಮೌಲ್ಯದ 4 ಕೆಜಿ ಎಂ.ಡಿ.ಎಂ.ಎ., ಕೊಣಾಜೆ ಪೊಲೀಸ್ ಠಾಣೆಯ ಸುಮಾರು ₹20 ಲಕ್ಷ ಮೌಲ್ಯದ 106 ಕೆಜಿ ಗಾಂಜಾ ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಯ ಸುಮಾರು ₹36 ಲಕ್ಷ ಮೌಲ್ಯದ 111 ಕೆಜಿ ಗಾಂಜಾ ಸೇರಿವೆ.
ಮಾದಕ ವಸ್ತುಗಳ ವಿರುದ್ಧ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರೂ ಸಹ ಸಹಕಾರ ನೀಡುವಂತೆ ಮನವಿ ಮಾಡಿದೆ. ಮಾದಕ ವಸ್ತುಗಳ ಸಂಗ್ರಹ, ಸಾಗಾಟ ಅಥವಾ ಮಾರಾಟಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆ ಸೃಜಿಸಿರುವ ಕ್ಯೂಆರ್ ಕೋಡ್ ಮೂಲಕ ಅಥವಾ 112 ಹಾಗೂ 9480802321 ಸಂಖ್ಯೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.



