ಮುಂಡಾಜೆ: ಗ್ರಾಮ ಸಭೆ ಪೂರ್ವಭಾವಿ ವಾರ್ಡ್ ಸಭೆ: ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಆಕ್ರೋಶ ಅಧಿಕಾರಿಗಳ ಹಾಜರಿಗೆ ಆಗ್ರಹ

ಶೇರ್ ಮಾಡಿ

 

ಮುಂಡಾಜೆ: ಗ್ರಾಮ ಸಭೆ ಪೂರ್ವಭಾವಿ ವಾರ್ಡ್ ಸಭೆ: ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಆಕ್ರೋಶ ಅಧಿಕಾರಿಗಳ ಹಾಜರಿಗೆ ಆಗ್ರಹ

ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ಹಾಗೂ ಮೂರನೇ ವಾರ್ಡ್‌ ನ ಗ್ರಾಮ ಸಭೆಗೆ ಪೂರ್ವಭಾವಿಯಾಗಿ ನಡೆದ ವಾರ್ಡ್ ಸಭೆಯಲ್ಲಿ ಮೂಲಸೌಕರ್ಯಗಳ ಕೊರತೆ, ರಸ್ತೆ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳು ಹಾಗೂ ವಿದ್ಯುತ್ ವ್ಯತ್ಯಯ ಸೇರಿದಂತೆ ಹಲವು ಸಾರ್ವಜನಿಕ ಸಮಸ್ಯೆಗಳ ಕುರಿತು ವ್ಯಾಪಕ ಚರ್ಚೆ ನಡೆಯಿತು. ಸಭೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದು, ನಾನಾ ಸಮಸ್ಯೆಗಳ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಪ್ರಮುಖವಾಗಿ ಸೀಟು-ಕಾಯರ್ತೋಡಿ-ಕೊಡಂಗೆ-ಮೂಲಾರು-ಕುಡೆಂಚಿ ಸಂಪರ್ಕ ರಸ್ತೆಯ ಅಭಿವೃದ್ಧಿ ವಿಚಾರ ಪ್ರಸ್ತಾಪಗೊಂಡಿತು. ಈ ರಸ್ತೆ ಹಲವು ದಶಕಗಳಿಂದ ಸಾರ್ವಜನಿಕರ ಪ್ರಮುಖ ಸಂಪರ್ಕ ಮಾರ್ಗವಾಗಿದ್ದರೂ ಇದುವರೆಗೆ ಯಾವುದೇ ಸಮರ್ಪಕ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯೊಂದು ಚುನಾವಣೆಯ ಸಂದರ್ಭ ರಸ್ತೆ ಅಭಿವೃದ್ಧಿಯ ಭರವಸೆ ನೀಡಲಾಗುತ್ತದೆ. ಶಿಲಾನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಆದರೆ ಬಳಿಕ ಯಾವುದೇ ಕಾಮಗಾರಿ ಆರಂಭವಾಗುವುದಿಲ್ಲ. ಹೀಗಾಗಿ ಅಭಿವೃದ್ಧಿ ಎಂಬುದು ಈ ಭಾಗದ ಜನರಿಗೆ ಮರೀಚಿಕೆಯಾಗಿ ಉಳಿದಿದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.

ಈ ರಸ್ತೆಯ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಆ ಭಾಗದ ನಾಗರಿಕರು ಎಚ್ಚರಿಕೆ ನೀಡಿದರು. ಗ್ರಾಮ ಸಭೆಯ ದಿನ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ ರಸ್ತೆ ಅಭಿವೃದ್ಧಿ ಕುರಿತು ಸ್ಪಷ್ಟ ಉತ್ತರ ನೀಡಬೇಕು ಹಾಗೂ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಆರಂಭಿಸುವ ಭರವಸೆ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಗ್ರಾಮದಲ್ಲಿ ಸಮಸ್ಯೆಗಳು ಉಂಟಾಗಿವೆ ಎಂದು ಗ್ರಾಮಸ್ಥರು ದೂರಿದರು. ಮಳೆಗಾಲದಲ್ಲಿ ನೀರು ಸರಿಯಾಗಿ ಹರಿಯದಿರುವುದು,ಕೆಲವು ಕಡೆಗಳಲ್ಲಿ ರಸ್ತೆ ಸಂಪರ್ಕಕ್ಕೆ ತೊಂದರೆ ಉಂಟಾಗಿರುವುದು, ಸಂಚಾರ ಸಮಸ್ಯೆಗಳು ಜನ ಜೀವನದ ಮೇಲೆ ಪರಿಣಾಮ ಬೀರಿವೆ ಎಂದು ತಿಳಿಸಿದರು. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಗ್ರಾಮ ಸಭೆಗೆ ಆಗಮಿಸಿ ಸಾರ್ವಜನಿಕರ ಅಹವಾಲುಗಳಿಗೆ ಉತ್ತರ ನೀಡಬೇಕು ಹಾಗೂ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂಬ ಆಗ್ರಹವೂ ವ್ಯಕ್ತವಾಯಿತು.

ಸಭೆಯಲ್ಲಿ ಗ್ರಾಮದ ವಿದ್ಯುತ್ ಸಮಸ್ಯೆಯ ಕುರಿತೂ ಚರ್ಚೆ ನಡೆಯಿತು. ಆಗಾಗ್ಗೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದು ಎಂದು ಗ್ರಾಮಸ್ಥರು ತಿಳಿಸಿದರು. ವಿದ್ಯುತ್ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಲಾಯಿತು.

ಪಿಡಿಒ ಗಾಯತ್ರಿ ಸ್ವಾಗತಿಸಿದರು. ಕಾರ್ಯದರ್ಶಿ ನಾಗವೇಣಿ, ವಿಶೇಷ ಆಹ್ವಾನಿತರಾಗಿ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಪದ್ಮನಾಭ ಆರ್. ಪಟವರ್ಧನ್ ಹಾಗೂ ಬಿಜು ಅಗರಿ ಉಪಸ್ಥಿತರಿದ್ದರು.

 

Leave a Reply

error: Content is protected !!