ವಿದ್ಯಾರ್ಥಿಗಳ ಪ್ರೌಢಶಾಲಾ ಶಿಕ್ಷಣದ ಅಂತಿಮ ಪರೀಕ್ಷೆ ಇದಾಗಿದ್ದು, ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ, ಪೂರ್ಣ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆಯುತ್ತಿದ್ದು, ಯಶಸ್ಸು ನಿಮ್ಮದಾಗಲಿ, ದೇವರ ಮೇಲೆ ಭರವಸೆಯನ್ನು ಇಡಿ, ಅಧ್ಯಾಪಕರು ನೀಡಿದಂಥ ಮಾರ್ಗದರ್ಶನ ವನ್ನು ಪಾಲಿಸಿ, ಸುಂದರವಾಗಿ ಕ್ರಮಬದ್ಧವಾಗಿ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಬರೆಯಲು ಮರೆಯಬೇಡಿ, ಸಮಯವನ್ನು ಸರಿಯಾಗಿ ಉಪಯೋಗಿಸಿ, ಯಶಸ್ವಿ ನಿಮ್ಮದಾಗಲಿ. ಒಂದು ವೇಳೆ ಉತ್ತರ ಬರೆಯುವಾಗ ತಪ್ಪಿದ್ದರೆ ಆತಂಕ ಪಡದೆ ಮುಂದಿನ ವಿಷಯದ ಬಗ್ಗೆ ತಯಾರು ಮಾಡಿ. ಕೋವಿಡ್ ಕಾರಣದಿಂದ ಮಕ್ಕಳ ಸುರಕ್ಷತೆಗೆ ಕ್ರಮ ವಹಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರಚಿಸಿಕೊಳ್ಳಬೇಕೆನ್ನುವುದು ನಮ್ಮ ಆಶಯ ಎಂದು ತಿಳಿಸಿ ಎಲ್ಲಾ ವಿದ್ಯಾರ್ಥಿಗಳಿಗೆ “ಆಲ್ ದಿ ಬೆಸ್ಟ್” ಎಂದು ಹೇಳಿದರು
– ಅಬ್ರಹಾಂ ವರ್ಗೀಸ್, ಸಂಚಾಲಕರು ಸಂತ ಜಾರ್ಜ್ ಪದವಿಪೂರ್ವಕಾಲೇಜು ನೆಲ್ಯಾಡಿ
ನೇಸರ ಮಾ.28: ರಾಜ್ಯದಾದ್ಯಂತ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು, ಇಂದು ಪ್ರಥಮ ಭಾಷೆ ಪರೀಕ್ಷೆಗಳು ನಡೆಯುತ್ತಿವೆ. 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8.73 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಪುನರಾವರ್ತಿತ ಅಭ್ಯರ್ಥಿಗಳು, ಖಾಸಗಿ ಅಭ್ಯರ್ಥಿಗಳು ಕೂಡ ಸೇರಿದ್ದಾರೆ.ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಇಂದಿನಿಂದ ಏಪ್ರಿಲ್ 11 ರವರೆಗೆ ನಡೆಯಲಿವೆ.
ಕಡಬ ತಾಲೂಕಿನ ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿಯಲ್ಲಿ ಸಕಲ ಸಿದ್ಧತೆಗಳೊಂದಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭ ಗೊಂಡಿದೆ. ಕಾಲೇಜು ವ್ಯಾಪ್ತಿಯ ಸಂತ ಜಾಜ್ ಪ್ರೌಢಶಾಲೆ ನೆಲ್ಯಾಡಿ, ಸಂತ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ನೆಲ್ಯಾಡಿ, ಸಂತ ಅಂತೋನಿ ಪ್ರೌಢಶಾಲೆ ಉದನೆ, ಕಾಂಚನ ವೆಂಕಟಸುಬ್ರಹ್ಮಣ್ಯ ಸ್ಮಾರಕ ಪ್ರೌಢಶಾಲೆ ಕಾಂಚನ, ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕೊಣಾಲು, ಸರಕಾರಿ ಪ್ರೌಢಶಾಲೆ ಪಡುಬೆಟ್ಟು, ಜ್ಞಾನೋದಯ ಬೆಥನಿ ಪಿಯು ಕಾಲೇಜು ನೆಲ್ಯಾಡಿ, ಶ್ರೀರಾಮ ವಿದ್ಯಾಲಯ ಸೂರ್ಯನಗರ ಗಳ ಒಟ್ಟು 8 ಶಾಲೆಗಳ ವಿದ್ಯಾರ್ಥಿಗಳಿಗೆ ಇಲ್ಲಿ ಪರೀಕ್ಷೆ ನಡೆಯುತ್ತಿದ್ದು, ಇದರಲ್ಲಿ ಬಾಲಕರು 176, ಬಾಲಕಿಯರು 163 ವಿದ್ಯಾರ್ಥಿಗಳು, ಸುಮಾರು 20 ಕೊಠಡಿಗಳಲ್ಲಿ ಪರೀಕ್ಷೆ ಬರೆಯುತ್ತಿದ್ದು, 30 ಪರೀಕ್ಷಾಧಿಕಾರಿಗಳು ಹಾಗೂ ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದು,ಮುಖ್ಯ ಅಧೀಕ್ಷಕ ರಾಗಿ ಸಂತ ಚಾರ್ಜ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಗುರು ಎಂ ವೈ ತೋಮಸ್ ರವರು ಕಾರ್ಯನಿರ್ವಹಿಸುತ್ತಿದ್ದಾರೆ.
ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಪೊಲೀಸ್ ಭದ್ರತೆ ಇರುತ್ತದೆ. ಮಕ್ಕಳನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರದ ಬಳಿ ಅನ್ಯರಿಗೆ ಪ್ರವೇಶ ಇರುವುದಿಲ್ಲ. ಕೋವಿಡ್ ಸೋಂಕು, ಸೋಂಕಿನ ಲಕ್ಷಣಗಳು ಇರುವವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ.